ಬೆಂಗಳೂರು : ಎಂಜಿ-ನರೇಗಾ ಯೋಜನೆಯ ಉದ್ದೇಶಕ್ಕೆ ಧಕ್ಕೆ ಬರುವಂತೆ ‘ವಿಬಿ ಜಿ ರಾಮ್ ಜಿ’ ಹೆಸರಿ ನಲ್ಲಿ ಯೋಜನೆ ಅನುಷ್ಠಾನಗೊಳಿಸುವ ಕೇಂದ್ರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದಿನಾಂಕ: 02-01-2026 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯಗಳು ಹೀಗಿವೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 (MGNREGA) ಯೋಜನೆಯ ಬದಲಾಗಿ ವಿಕಸಿತ್ ಭಾರತ್ -ಗ್ಯಾರಂಟಿ ಫಾರ್ ರೋಜ್ಗಾರ್ & ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ 2025 (VB-G RAM G) ಜಾರಿಗೊಳಿಸಿರುವ ಕೇಂದ್ರದ ಕ್ರಮವನ್ನು ತೀವ್ರವಾಗಿ ಖಂಡಿಸಲು ಸಚಿವಸಂಪುಟ ನಿರ್ಣಯ ಕೈಗೊಂಡಿದೆ.
ಅಧಿಕಾರ ವಿಕೇಂದ್ರೀಕರಣ, ಗ್ರಾಮಗಳಿಗೆ ಅಭಿವೃದ್ಧಿ ತಲುಪಿಸುವ ಅಧಿಕಾರವನ್ನು ಗ್ರಾಮಪಂಚಾಯತಿಗಳಿಗೆ ನೀಡಲಾಗಿದ್ದ ಎಲ್ಲ ರಚನಾತ್ಮಕ, ಸಕಾರಾತ್ಮಕ, ಸ್ವರಾಜ್ಯದ ಪರಿಕಲ್ಪನೆಯನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.
ಈ ಯೋಜನೆ ರದ್ಧತಿ ಕುರಿತು ವಿವರವಾದ ಪತ್ರಿಕಾಗೋಷ್ಠಿಯನ್ನು ಮುಖ್ಯಮಂತ್ರಿಗಳು ನಾಳೆ ಕೈಗೊಳ್ಳಲಿದ್ದಾರೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಹೆಚ್.ಕೆ.ಪಾಟೀಲ್ ರವರು ತಿಳಿಸಿದರು.




