ಸಿರುಗುಪ್ಪ: ನಗರದ ನೇತಾಜಿ ವ್ಯಾಯಾಮ ಶಾಲೆಯ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಸಮಾರಂಭವನ್ನು ಶಾಸಕ ಬಿ.ಎಮ್.ನಾಗರಾಜ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಸಂವಿಧಾನದಲ್ಲಿ ಎಲ್ಲಾ ಜಾತಿ ಜನಾಂಗಗಳಿಗೆ ಮೀಸಲಾತಿಯ ಅವಕಾಶ ಕಲ್ಪಿಸಿಕೊಟ್ಟಿದೆ. ಅದೇ ರೀತಿ ಯಾರೇ ವ್ಯಕ್ತಿಯಾಗಲೀ ಯಾವುದೇ ಪಕ್ಷವಾಗಲೀ ಸಂವಿಧಾನಬದ್ದ ಮೀಸಲಾತಿಯನ್ನು ಗೌರವಿಸಬೇಕು. ಈಗಿನಿಂದಲೇ ಜಾಗೃತಿಯಾಗದಿದ್ದಲ್ಲಿ ಹಳೇ ಪದ್ದತಿಯನ್ನು ತರುವ ಹುನ್ನಾರಕ್ಕೆ ನಾವೇ ಅವಕಾಶ ನೀಡಿದಂತಾಗುತ್ತದೆ. ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು.
ಜೊತೆಗೆ ಮೀಸಲಾತಿಯಲ್ಲಿ ಬರುವ ಸರ್ಕಾರಿ ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಮುಂದೆ ಬರಬೇಕು
ಒನಕೆ ಓಬವ್ವಳ ವೀರತನ ಹಾಗೂ ಶೌರ್ಯವನ್ನು ನಾವೆಲ್ಲರೂ ಕೇಳಿರಬಹುದು ಆದರೆ ನೋಡಿರಲಿಲ್ಲ ಅಂತಹ ಸನ್ನಿವೇಶವನ್ನು ಕಣ್ಣಮುಂದೆ ಕಟ್ಟುವಂತಹ ದೃಶ್ಯವನ್ನು ಪುಟ್ಟಣ ಕಣಗಲ್ ಅವರು ನಟ ವಿಷ್ಣುವರ್ದನ್ ಅವರ ಮೊದಲ ಚಿತ್ರ ನಾಗರಹಾವು ಚಿತ್ರದ ಮೂಲಕ ತಿಳಿಸಿದ್ದು ಅಂತಹವರನ್ನು ನಾವೆಲ್ಲಾ ಇಂದು ಸ್ಮರಿಸಬೇಕಿದೆ.
ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲೂ ದೃಶ್ಯಗಳ ಮೂಲಕ ಪಾಠಗಳನ್ನು ತರುವ ಪ್ರಯತ್ನ ಸರ್ಕಾರದಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಯಂತಿಯ ಮುಖ್ಯ ಭಾಷಣ ಮಾಡಿದ ಕಂಪ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಣ ಪರಮೇಶ್ವರ ಅವರು ಮದಕರಿ ನಾಯಕರ ಆಳ್ವಿಕೆಯ ಉಕ್ಕಿನ ಕೋಟೆಯಂತಿರುವ ಚಿತ್ರದುರ್ಗ ಕೋಟೆಯನ್ನು ಅಷ್ಟು ಸುಲಭವಾಗಿ ಬೇಧಿಸುವುದು ಕಷ್ಟಕರವಾಗಿತ್ತು.
ಆದರೆ ನಮ್ಮ ದೇಶದ ಇತಿಹಾಸವನ್ನು ತೆಗೆದು ನೋಡಿದಾಗ ನಮ್ಮನ್ನು ಆಳಿದ ರಾಜಮನೆತನಗಳು ಆಳಾಗಿರುವುದು ನಮ್ಮಲ್ಲೇ ಇರುವ ಕೆಲವು ನಾಡು ಮತ್ತು ದೇಶದ್ರೋಹಿಗಳಿಂದಾಗಿ ಎಂಬುದು ಗೊತ್ತಾಗುತ್ತದೆ.
ಅಧಿಕಾಗೋಸ್ಕರ ತಮ್ಮ ಸ್ವಾರ್ಥಕ್ಕಾಗಿ ಬಹಳಷ್ಟು ಜನ ಪ್ರಜೆಗಳನ್ನು ಬಲಿಕೊಟ್ಟಿರುವ ಚರಿತ್ರೆಯನ್ನು ಬಹಳಷ್ಟು ಇತಿಹಾಸದಲ್ಲಿ ಕಾಣಬಹುದಾಗಿದೆ.
ಸಮುದಾಯ, ನಾಡು, ದೇಶಕ್ಕಾಗಿ ತ್ಯಾಗ ಬಲಿದಾನಗೈದವರನ್ನು ಇಂದು ಸ್ಮರಿಸಲಾಗುತ್ತೆ ಹೊರತು ತಮಗಾಗಿ ತನ್ನವರಿಗಾಗಿ ಬದುಕಿದವರನ್ನ ಅಲ್ಲ. ನಾಡ ರಕ್ಷಣೆಗೆಗಾಗಿ ಅಂದು ತನ್ನ ಗಟ್ಟಿತನದಿಂದ ಹೋರಾಡಿದ ಓಬವ್ವಳ ಶೂರತನ ನಾವೆಲ್ಲರೂ ಸ್ಮರಿಸಬೇಕಿದೆಂದರು. ಉಚ್ಚ ಮಠದ ಶ್ರೀ ಬಸವರಾಜ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು.
ಇದೇ ವೇಳೆ ಶಿರಸ್ತೆದಾರ ಸಿದ್ದಾರ್ಥ್ ಕಾರಂಜಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ನಗರಸಭೆ ಸಮುದಾಯ ಸಂಘಟನಾಧಿಕಾರಿ ಅಮರೇಶ, ತಾಲೂಕು ಪಂಚಾಯಿತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮನೋಹರ, ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಬಿ.ಸಣ್ಣರಾಮಯ್ಯ, ತಾಲೂಕಾಧ್ಯಕ್ಷ ಹೆಚ್.ಗಣೇಶ, ವಿವಿಧ ಸಮಾಜ ಮತ್ತು ಸಂಘಟೆಗಳ ಪದಾಧಿಕಾರಿಗಳು ಹಾಗೂ ಮುಖಂಡರಾದ ನರಸಿಂಹನಾಯಕ, ಬಿ.ಎಮ್.ಸತೀಶ, ದಮ್ಮೂರು ಸೋಮಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಗಾಳೆಪ್ಪ, ಟಿ.ಧರಪ್ಪನಾಯಕ ಸೇರಿದಂತೆ ಇನ್ನಿತರರಿದ್ದರು.
ವರದಿ: ಶ್ರೀನಿವಾಸ ನಾಯ್ಕ




