ವಿಜಯಪುರ: ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮರ್ಯಾಧಾ ಹತ್ಯೆ ಮಾಡಿದಂತ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ರೇ, 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಕೋರ್ಟ್ ಆದೇಶಿಸಿದೆ.
ಇಂದು ಈ ಕುರಿತಂತೆ ವಿಜಯಪುರ ಜಿಲ್ಲೆಯ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ.ಮರ್ಯಾಧಾ ಹತ್ಯೆ ಮಾಡಿದಂತ ಇಬ್ರಾಹಿಂಸಾಬ್ ಅತ್ತಾರ್ ಹಾಗೂ ಅಕ್ಬರ್ ಸಾಭ್ ಅತ್ತಾರ್ ಎಂಬುವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.
ಇನ್ನೂ ಇದೇ ಪ್ರಕರಣದಲ್ಲಿ ರಂಜಾನ್ ಬಾಬಿ, ದಾವಲಭಿ ಜಮಾದಾ, ಅಜಮಾ ಸೇರಿದಂತೆ 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೇ 4.19 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಿ ಕೋರ್ಟ್ ಆದೇಶಿಸಿದೆ.
ಅಂದಹಾಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಯಬಣ್ಣ ಪ್ರೀತಿಸಿ ಮದುವೆಯಾಗಿದ್ದರು.
ಮದುವೆಯ ನಂತ್ರ ಬೇರೆ ಊರಿಗೆ ಹೋಗಿ ಬಾನು ಬೇಗಂ ಹಾಗೂ ಸಾಯಬಣ್ಣ ವಾಸಿಸುತ್ತಿದ್ದರು. ಹೆರಿಗೆಗಾಗಿ 2017ರಲ್ಲಿ ಮನೆಗೆ ಬಂದಿದ್ದಂತ ಸಂದರ್ಭದಲ್ಲಿ ದಂಪತಿಗಳ ಮೇಲೆ ಬಾನು ಬೇಗಂ ತಂದೆ, ತಾಯಿ, ಸಂಬಂಧಿಕರು ದಾಳಿ ಮಾಡಿದ್ದರು.
ಬಾನು, ಸಾಯಬಣ್ಣ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಮೂರ್ಛೆ ಹೋಗಿದ್ದ ಬಾನು ಬೇಗಂ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿ ಮರ್ಯಾಧಾ ಹತ್ಯೆಗೈದಿದ್ದರು. ಹಲ್ಲೆಕೋರರಿಂದ ಸಾಯಬಣ್ಣನನ್ನು ಸಾರ್ವಜನಿಕರು ರಕ್ಷಿಸಿದ್ದರು.
ಈ ಘಟನೆಯ ಬಗ್ಗೆ ತಾಳಿಕೋಟೆ ಠಾಣೆಯ ಪೊಲೀಸರು ಮರ್ಯಾಧಾ ಹತ್ಯೆ ಪ್ರಕರಣ ದಾಖಲಿಸಿದ್ದರು. ಬಾನು ಬೇಗಂ ಅತ್ತಾರ್ ಅವರ ತಂದೆ-ತಾಯಿ ಸೇರಿದಂತೆ ಸಂಬಂಧಿಕರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ತಾಳಿಕೋಟೆ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಸರ್ಕಾರದ ಪರ ಅಭಿಯೋಜಕ ಎಸ್ ಎಸ್ ಲೋಕರ ವಾದ ಮಂಡಿಸಿದ್ದರು. ಸುದೀರ್ಘವಾದ ಪ್ರತಿವಾದ ಆಲಿಸಿದಂತ ವಿಜಯಪುರದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದಂತ ಸತೀಶ್ ಅವರು ಇಬ್ಬರು ಆಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.