ಸಿರುಗುಪ್ಪ : -ತಾಲೂಕಿನ ಗಡಿಭಾಗದಲ್ಲಿರುವ ಬೀರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪುಟ್ಟ ಗ್ರಾಮವಾದ ಬಸರಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಶಿಥಿಲಗೊಂಡ ಬಸ್ ನಿಲ್ದಾಣವಿದ್ದು ಸುತ್ತಲೂ ಸ್ವಚ್ಛತೆಯಿಲ್ಲ.
ಆದ್ದರಿಂದ ವಿದ್ಯಾಭ್ಯಾಸಕ್ಕೆ ದೂರದ ತಾಲೂಕು ಕೇಂದ್ರಕ್ಕೆ ತೆರಳುವ ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಹಾಗೂ ಇನ್ನಿತರ ಗ್ರಾಮಗಳಿಗೆ ಪ್ರಯಾಣ ಸುವ ಗ್ರಾಮಸ್ಥರು ಗ್ರಾಮದ ಹೊರಗಿರುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲೇ ಬಿಸಿಲು ಮಳೆಯನ್ನು ಲೆಕ್ಕಿಸದೇ ನಿಲ್ಲಬೇಕಾದ ಅನಿವಾರ್ಯತೆ ಬಂದೊದಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದಾಗಿದ್ದು, ಆಗಾಗ ಕೈಕೊಡುವ ಶುದ್ದ ಕುಡಿಯುವ ನೀರಿನ ಘಟಕವು ಇದ್ದು ಇಲ್ಲದಂತಾಗಿದೆ.
ಆರೋಗ್ಯ ವಿಚಾರಕ್ಕೆ ಬಂದರೆ ವೈದ್ಯರ ಕೊರತೆಯಿರುವ ರಾವಿಹಾಳ್ ಅಥವಾ ಹಚ್ಚೊಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಲೆಯುವಂತಾಗಿದೆ.
ಶಿಥಿಲಗೊಂಡ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆಂದು ಭೂಮಿಪೂಜೆ ಸಲ್ಲಿಸಿ ವರ್ಷವೇ ಕಳೆದರೂ ಕಾಮಗಾರಿ ಆರಂಭವಾಗಿಲ್ಲ.
ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜನಾಂಗದವರೇ ಹೆಚ್ಚಿರುವ ಈ ಗ್ರಾಮದಲ್ಲಿ ಅಭಿವೃದ್ದಿ ಕುಂಠಿತಗೊಂಡು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಸವಳಿಯುತ್ತಿದೆಂದರೆ ತಪ್ಪಾಗಲಾರದು.
ಇನ್ನು ಮುಂದಾದರೂ ಸಂಬಂದಿಸಿದ ಅಧಿಕಾರಿಗಳು ಈ ಗ್ರಾಮಕ್ಕೆ ಅಗತ್ಯವಿರುವ ಬಸ್ ನಿಲ್ದಾಣ, ಅಂಗನವಾಡಿ ಕೇಂದ್ರ, ಸೂಕ್ತ ಚರಂಡಿ ವ್ಯವಸ್ಥೆ, ನೂತನ ಅಂಗನವಾಡಿ ಕೇಂದ್ರ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಮುಂದಾಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ವರದಿ. ಶ್ರೀನಿವಾಸ ನಾಯ್ಕ