ಧಾರವಾಡ: ಕೇವಲ 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಚಿವ ಸ್ಥಾನಕ್ಕೆ ನಾನು ಕೂಡಾ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ಮತ್ತು ಸವದಿ ಹೆಸರು ಕೇಳಿ ಬರುತ್ತಿದೆ.
ಇನ್ನು ಈ ಕುರಿತು ಹೈ ಕಮಾಂಡ್ ತೀರ್ಮಾನ ತೆಗೆದುಕೋಳ್ಳಲಿದೆ. ಇದಕ್ಕೆ ನನ್ನ ವೈಯಕ್ತಿಕ ಅಭಿಪ್ರಾಯ ಏನು ಇಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದರು.
ಪಂಚಮಸಾಲಿ ಹೋರಾಟಕ್ಕೆ ಸಂಬಂಧಿಸಿದಂತೆ ಕಳೆದ ಅಧಿವೇಶನದಲ್ಲಿ ಸ್ಪೀಕರ್ ಅವರಿಗೆ ಸಮಯ ಕೇಳಿದ್ದೆವು. ಆದರೆ ಸದನ ನಡೆಯಲಿಲ್ಲ. ಮುಡಾ ಹಗರಣದಿಂದ ಒಂದು ದಿನವು ಕೂಡ ಸದನ ನಡೆಯಲು ಬಿಡಲಿಲ್ಲ. ಆ ಸಮಯದಲ್ಲಿ ಯಾರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳು ಇದ್ದಾರೆ. ಆದರೆ ಈ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಚಿವರಾಗಿರುವ ಕಾರಣ ಕೆಲಸ ಮಾಡಲು ಕಷ್ಟವಾಗುತ್ತಿದೆ. ಒತ್ತಡ ಜಾಸ್ತಿ ಇರುವ ಕಾರಣ ಬದಲಾವಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಉಪಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದರೂ ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಸಂಕ್ರಾಂತಿ ವರೆಗೂ ಸಂಪುಟ ವಿಸ್ತರಣೆ ಇಲ್ಲ ಎಂದಿದ್ದರು.