ಚನ್ನಮ್ಮನ ಕಿತ್ತೂರು : ವಿಶ್ವಗುರು ಬಸವಣ್ಣನವರ 891ನೇ ಜಯಂತಿಯನ್ನು ಅಕ್ಷಯ ತೃತೀಯದಂದು ಕಿತ್ತೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಣಿ ಚನ್ನಮ್ಮಾಜಿ ಕೂಟದಿಂದ ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಬೃಹತ್ ಪಾದಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಚನ್ನಮ್ಮನ ವೃತ್ತದ ವರೆಗೆ ಮೆರವಣಿಗೆ ಬಂದು ನಂತರ ಮತ್ತು ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ ಅಳ್ನಾವರ ಅವರು, “ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಲ್ಲ, ಇಡೀ ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅವರ ವಿಶ್ವಮಾನ್ಯ ತತ್ವಗಳನ್ನು ಜನರಿಗೆ ತಿಳಿಸುವುದು ಈ ದಿನದ ಸಾರ್ಥಕತೆಯನ್ನು ಹತ್ತು ಪಟ್ಟು ಹೆಚ್ಚಿಸುತ್ತದೆ,” ಎಂದು ಹೇಳಿದರು.ಅವರು ಮಾತನಾಡುತ್ತಾ, “ಮಹಮದ್ ಪೈಗಂಬರ ಮತ್ತು ಏಸು ಕ್ರಿಸ್ತರಂತೆ ಜಾಗತಿಕ ಧರ್ಮದ ಸಾಲಿನಲ್ಲಿ ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಇದು ಅವರನ್ನು ವಿಶ್ವಗುರುವನ್ನಾಗಿಸಿದೆ,” ಎಂದು ಒತ್ತಿ ಹೇಳಿದರು.
ಅಖಿಲ ಭಾರತ ಲಿಂಗಾಯತ ಮಹಾಸಭಾದ ಕಿತ್ತೂರು ತಾಲೂಕಾ ಅಧ್ಯಕ್ಷ ಡಿ.ಆರ್. ಪಾಟೀಲ ಅವರು ಮಾತನಾಡಿ, “ಬಸವ ಜಯಂತಿಯಂದು ಕೇವಲ ಭಾಷಣ ಮಾಡಿದರೆ ಸಾಲದು, ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮುಂದಿನ ಬಸವ ಜಯಂತಿಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ ಅವರ ನೇತೃತ್ವದಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಿಸೋಣ,” ಎಂದು ಕರೆ ನೀಡಿದರು.
ದೇಗುಲಹಳ್ಳಿ ಮಡಿವಾಳೇಶ್ವರ ಮಠದ ಶ್ರೀ ವೀರೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, “12ನೇ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ಜಾತಿವ್ಯವಸ್ಥೆ, ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಧ್ವನಿಯಾಗಿ ಸಮಾನತೆ, ಭಕ್ತಿ ಮತ್ತು ಕಾಯಕದ ಗೌರವವನ್ನು ಪ್ರತಿಪಾದಿಸಿದ ಶಕ್ತಿಶಾಲಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಳವಳಿಯು ಲಿಂಗಾಯತ ಧರ್ಮದ ಜನನಕ್ಕೆ ಕಾರಣವಾಯಿತು. ಇಂದಿನ ಯುವ ಪೀಳಿಗೆ ಈ ತತ್ವಗಳನ್ನು ಅಳವಡಿಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಮತ್ತು ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶರಣರ ವೇಷದಲ್ಲಿ ಕಾಣಿಸಿಕೊಂಡ ಮಕ್ಕಳು ಎಲ್ಲರ ಗಮನ ಸೆಳೆದರು. ಪಟ್ಟಣದ ನಾಗರಿಕರು ಬಸವಾದಿ ಶಿವಶರಣರ ಭಾವಚಿತ್ರಗಳ ಮೆರವಣಿಗೆಗೆ ನೀರು ಸುರಿದು, ಹೂವು ಎರಚಿ ಗೌರವದಿಂದ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಸದಸ್ಯರಾದ ಕಿರಣ ಪಾಟೀಲ, ಪಾಪು ನರಗುಂದ, ನಾಗರಾಜ ಮಿರಾಜಗಿ, ಎಸಿಎಫ್ ಸಂಘದ ಈರಣ್ಣ ದೊಡಮನಿ, ರಾಜೇಂದ್ರ ಹುಬ್ಬಳ್ಳಿ, ಪುಂಡಲೀಕ ಸುಣಗಾರ, ಮಡಿವಾಳೆಪ್ಪ ಕೋಟಿ, ಚಂದ್ರಗೌಡ ಪಾಟೀಲ, ಮಹೇಶ ಪೂಜೇರ, ಚನ್ನಮ್ಮನ ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಶರಣ ಭಕ್ತರು, ರಾಜಕೀಯ ನಾಯಕರು, ಯುವಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಬಸವ ತತ್ವಗಳ ಸಾರ್ಥಕತೆಗೆ ಒತ್ತು ಈ ಕಾರ್ಯಕ್ರಮವು ಬಸವಣ್ಣನವರ ಆದರ್ಶಗಳನ್ನು ಜನರಿಗೆ ತಲುಪಿಸುವ ಜೊತೆಗೆ, ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ಮತ್ತು ಭಕ್ತಿಯ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿತು.
ವರದಿ – ಬಸವರಾಜ ಭಿಮರಾಣಿ.




