ತುರುವೇಕೆರೆ: ವಿಶ್ವಕರ್ಮ ಸಮುದಾಂiವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದು ಉಪತಹಸೀಲ್ದಾರ್ ಸುನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ಮಿನಿವಿಧಾನಸೌಧದದಲ್ಲಿ ತಾಲ್ಲೂಕು ಆಡಳಿತ, ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಆಚರಣೆಯಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಂದು ಸಮುದಾಯದೊಡನೆ ವಿಶ್ವಕರ್ಮ ಸಮಾಜ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂದು ಪ್ರತಿಯೊಬ್ಬರ ಮನೆಯಲ್ಲಿ ಅಲಂಕರಿಸಿರುವ ದೇವರ ವಿಗ್ರಹ, ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ಕರಕುಶಲ ವಸ್ತುಗಳು, ಗೃಹಬಳಕೆ ಪೀಠೋಪಕರಗಳು ಎಲ್ಲವೂ ಈ ಸಮುದಾಯದ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಪ್ರಪಂಚವನ್ನು ಸಾಂಸ್ಕೃತಿಕವಾಗಿ ವೈಭವೀಕರಿಸುವ ಪರಂಪರೆ, ಕಲೆ, ವಾಸ್ತುಶಿಲ್ಪಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದರು.
ತಾಲ್ಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಅರುಣ್ ಮಾತನಾಡಿ, ನಾಡಿಗೆ ವಿಶ್ವಕರ್ಮರು ನೀಡಿದ ಅವಿಸ್ಮರಣೀಯ ಕೊಡುಗೆಯನ್ನು ಗೌರವಿಸಿ ಸರ್ಕಾರದ ವತಿಯಿಂದ ಅವರ ಆಚರಣೆಯನ್ನು ನಡೆಸುತ್ತಿರುವುದು ಸಮುದಾಯಕ್ಕೆ ಬಹಳ ಸಂತಸ ತಂದಿದೆ. ತಾಲ್ಲೂಕು ಆಡಳಿತ ಪ್ರತಿ ವರ್ಷ ಬಹಳ ಗೌರವಪೂರ್ವಕವಾಗಿ ವಿಶ್ವಕರ್ಮರ ಜಯಂತಿಯನ್ನು ನಡೆಸುತ್ತಿದೆ. ಇದಕ್ಕೆ ಸಮುದಾಯದ ವತಿಯಿಂದ ಧನ್ಯವಾದ ಅರ್ಪಿಸುತ್ತೇನೆ. ಸಮುದಾಯದ ಬಾಂದವರು ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಬೇಕೆಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಅಂಬುಜಾಕ್ಷಿ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜ್, ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ರಾಜಾಚಾರ್, ಕಾರ್ಯದರ್ಶಿ ಸತೀಶ್, ಸಂಘಟನಾ ಕಾರ್ಯದರ್ಶಿ ಗೌತಮ್, ಅಶೋಕ್, ಸಹಕಾರ್ಯದರ್ಶಿ ನಂದೀಶ್, ಮುಖಂಡರಾದ ಅಮ್ಮಸಂದ್ರ ವಿಶ್ವನಾಥ್, ರಂಗಾಚಾರ್, ಕುಮಾರ್, ಲಿಂಗಾಚಾರ್, ಬಸವರಾಜ್, ಚಂದ್ರಶೇಖರ್, ಯಶವಂತ್, ವಿಶ್ವನಾಥ್, ಸತೀಶ್, ರವಿ, ಪರಮೇಶ್ವರಾಚಾರ್ ಹಾಗೂ ಕಂದಾಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




