——— ಬಿಡಿಸಿಸಿ ಬ್ಯಾಂಕ್ ಚುನಾವಣೆ: ಅಕ್ಟೋಬರ್ 19 ರ ಮತದಾನಕ್ಕೆ ಸಕಲ ಸಿದ್ದತೆ ಪೂರ್ಣ
———: ಚುನಾವಣಾಧಿಕಾರಿ ಶ್ರವಣ ನಾಯ್ಕ ಮಾಹಿತಿ
ಬೆಳಗಾವಿ: ಜಿಲ್ಲಾದ್ಯಂತ, ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬಿಡಿಸಿಸಿ ಬ್ಯಾಂಕ್ ಚುನಾವಣೆ ಮತದಾನ ಅಕ್ಟೋಬರ್ 19 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 4 ಗಂಟೆವರೆಗೆ ಜರುಗಲಿದ್ದು, ಅಂದೇ ಮತ ಏಣಿಕೆ ಜರುಗಿ ಅಂದೇ ಫಲಿತಾಂಶ ಹೊರ ಬೀಳಲಿದೆ ಎಂದು ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯ್ಕ ತಿಳಿಸಿದರು.
ಅವರು ಗುರುವಾರ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ತಿಳಿಸಿದರು. ಓರ್ವ ಇತರೇ ವಿಭಾಗದ ನಿರ್ಧೇಶಕರು ಸೇರಿದಂತೆ 17 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಈ ಪೈಕಿ 9 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಜರುಗಿದ್ದು, ಇನ್ನುಳಿದ 7 ಸ್ಥಾನಗಳಿಗೆ 19 ರಂದು ಚುನಾವಣೆ ಜರುಗಬೇಕಿದೆ ಎಂದರು.
ಏಳು ಸ್ಥಾನಗಳಿಗೆ ಜರುಗುವ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 698 ಮತದಾರರು ಮತ ಪಟ್ಟಿ ಪ್ರಕಾರ ಇದ್ದು, ಇದರಲ್ಲಿ 676 ಮತದಾರರು ಮತ ಹಾಕಲು ಅರ್ಹತೆ ಹೊಂದಿದ್ದಾರೆ. ಈ ಮತದಾರರು 19 ರಂದು ತಮ್ಮ ಹಕ್ಕು ಚಲಾಯಿಸಲಿದ್ದು, ಏಳು ಸದಸ್ಯರ ಹಣೆ ಬರಹ ಬರೆಯಲಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕ್ರಮ: ಮತಕ್ಕಾಗಿ ಮತದಾರರ ಮೇಲೆ ಒತ್ತಡ ಹೇರಿ ಗೊಂದಲ ಸೃಷ್ಠಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆಗಳು ನ್ಯಾಯಾಲಯದಿಂದ ನಮಗೆ ಬಂದರೆ ತಾವು ನ್ಯಾಯಾಲಯದ ಆದೇಶದಂತೆ ಕ್ರಮ ವಹಿಸುವುದಾಗಿ ಚುನಾವಣಾಧಿಕಾರಿಗಳು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಸ್ಪಷ್ಟ ಪಡಿಸಿದರು.
ಚೀಟಿ ಎತ್ತುವ ಮೂಲಕ ಸೋಲು, ಗೆಲುವಿನ ನಿರ್ಧಾರ: ಒಂದು ವೇಳೆ ಇಬ್ಬರು ಅಭ್ಯರ್ಥಿಗಳು ಸಮನಾದ ಮತ ಪಡೆದರೆ, ಚೀಟಿ ಎತ್ತುವ ಮೂಲಕ ಅಭ್ಯರ್ಥಿಗಳ ಗೆಲುವು, ಸೋಲಿನ ನಿರ್ಧಾರ ಮಾಡಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದರು.




