ತುರುವೇಕೆರೆ : ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ಪರಮಾಣು ದಾಳಿ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ. ಈ ಘಟನೆಯನ್ನು ನೆನಪಿಸಿ ಜಗತ್ತಿನಾದ್ಯಂತ ನಿಶಸ್ತ್ರೀಕರಣಕ್ಕೆ ಒತ್ತಾಯಿಸಲು ಆಗಸ್ಟ್ 06 ಅನ್ನು ಹಿರೋಶಿಮಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್.ಉಮೇಶ್ ತಿಳಿಸಿದರು.

ಪಟ್ಟಣದ 12 ನೇ ವಾರ್ಡಿನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಹಿರೋಶಿಮ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1945 ರ ಆಗಸ್ಟ್ 05 ರಂದು ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಅಮೇರಿಕಾ ದೇಶವು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಪರಮಾಣು ದಾಳಿ ನಡೆಸಿತು. ಇದರಿಂದ ನಗರದಲ್ಲಿದ್ದ ಲಕ್ಷಾಂತರ ಮಂದಿ ಸಾವನ್ನಪ್ಪಿದರೆ, ಸಹಸ್ರಾರು ಮಂದಿ ಯುದ್ಧದ ಪರಿಣಾಮದಿಂದ ಬಳಲಿದರು. ಸಾವನ್ನಪ್ಪಿದವರ ಸ್ಮರಣೆ, ಗಾಯದಿಂದ ಬಳಲಿದವರಿಗೆ ಗೌರವ ಸಲ್ಲಿಸಲು ಹಿರೋಶಿಮಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿ.ಆರ್.ಪಿ. ಸುರೇಶ್, ಹಿರೋಶಿಮಾ ಘಟನೆ ವಿಶ್ವಾದ್ಯಂತ ಯುದ್ಧ-ವಿರೋಧಿ ಮತ್ತು ಪರಮಾಣು-ವಿರೋಧಿ ಪ್ರದರ್ಶನಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುವುದರಿಂದ ಹಿರೋಷಿಮಾ ದಿನವು ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ. ಶಾಂತಿಯನ್ನು ಉತ್ತೇಜಿಸುವ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣದ ವಿರುದ್ಧ ಪ್ರತಿಪಾದಿಸುವ ಗುರಿಯನ್ನು ಹೊಂದಿರುವ ವಿವಿಧ ಚಟುವಟಿಕೆಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಸಮಾರಂಭದಲ್ಲಿ ಆಯೋಜಿಸಿದ್ದ ಆಶುಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪಪಂ ಸದಸ್ಯ ಅಂಜನ್ ಕುಮಾರ್, ಮುಖ್ಯ ಶಿಕ್ಷಕ ನಂ.ರಾಜು, ರೋಟರಿ ಖಜಾಂಚಿ ಪ್ರಸನ್ನಕುಮಾರ್, ಪದಾಧಿಕಾರಿಗಳಾದ ಅರಳೀಕೆರೆ ಲೋಕೇಶ್, ಮೋಹನ್ ಕುಮಾರ್, ಜೀಲನ್, ಉಪೇಂದ್ರ, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಶೋಭಾ ಉಮೇಶ್, ಆನಂದಜಲ, ಲತಾರವಿಕುಮಾರ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




