ಬೆಳಗಾವಿ :ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು)ವು 25 ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆಯನ್ನು ಮಾಡಿದ್ದು, ಅಂತಿಮ ವರ್ಷದ ಬಿ.ಇ./ಬಿ.ಟೆಕ್./ಬಿ.ಆರ್ಕ್/ಬಿ.ಪ್ಲಾನ್ ಸೆಮಿಸ್ಟರ್ ಪರೀಕ್ಷೆ ಮುಗಿದ ದಿನವೇ ಅಂತಿಮ ಸೆಮಿಸ್ಟರ್ ನ 42323 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಣೆ ಮಾಡಿ ದಾಖಲೆ ಮಾಡಿದೆ ಎಂದು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಿತಾಂಶವನ್ನು ಬೇಗ ಪ್ರಕಟಣೆ ಮಾಡುವದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ವಿಭಾಗದಲ್ಲಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ಭವಿಷ್ಯಕ್ಕೆ ತುಂಬಾ ಅನುಕೂಲವಾಗುತ್ತದೆ.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿಟಿಯುದಲ್ಲಿ ಆಡಳಿತ. ಶೈಕ್ಷಣಿಕ, ಪರೀಕ್ಷೆ, ಸಂಶೋಧಾನಾ ವಿಭಾಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದು ಈ ಸಾಧನೆಯನ್ನು ಮಾಡಿದೆ ಎಂದು ಮಾನ್ಯ ಕುಲಪತಿಗಳು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಇಂಜಿನಿಯರಿಂಗ್ ಮಹಾವಿದ್ಯಾಲಯಗಳ ಅಂತಿಮ ಸೆಮಿಸ್ಟರನಲ್ಲಿ ಪರೀಕ್ಷೆ ಬರೆದ 42323 ವಿದ್ಯಾರ್ಥಿಗಳ ಪರೀಕ್ಷೆ ಗುರುವಾರ ಮೇ 30, 2024 ರಂದು ಸಂಜೆ 5:30ಗೆ ಪರೀಕ್ಷೆಗಳು ಕೊನೆಗೊಂಡವು, ಪರೀಕ್ಷೆ ಮುಗಿದ ಮೂರು ಗಂಟೆ ಒಳಗಾಗಿ ಅಂದರೆ ರಾತ್ರಿ 8:30ಗೆ ಫಲಿತಾಂಶವನ್ನು ಪ್ರಕಟಣೆ ಮಾಡಿ ವಾಟ್ಸಾಪ್ ಮುಖಾಂತರ ಫಲಿತಾಂಶವನ್ನು ನೇರವಾಗಿ ವಿದ್ಯಾರ್ಥಿಗಳಿಗೆ ತಲುಪುವಂತೆ ವಿಟಿಯು ಮಾಡಿದೆ.
ಜೊತೆಗೆ ಎಲ್ಲ ಸೆಮಿಸ್ಟರ್ ಪರೀಕ್ಷೆಗಳಲ್ಲಿತೇರ್ಗಡೆ ಹೊಂದಿ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳು ಪ್ರೋವಿಜನಲ್ ಡಿಗ್ರಿ ಸರ್ಟಿಫಿಕೇಟ್ (ಪಿಡಿಸಿ) ಗಳನ್ನು ಸೋಮವಾರ, ದಿನಾಂಕ 03.06.2024 ದಿಂದ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.