——————————————ಗಮನ ಸೆಳೆದ ಸಾಯಿ ಸುದರ್ಶನ್, ಪ್ರಿಯಾನ್ಸ್ ಆರ್ಯ, ವೈಭವ್ ಸೂರ್ಯವಂಶಿ

ಪ್ರಿಯಾನ್ಸ್ ಆರ್ಯ, ವೈಭವ್ ಸೂರ್ಯವಂಶಿ ಸಾಯಿ ಸುದರ್ಶನ್
ಐಪಿಎಲ್ ಟ್ವೆಂಟಿ -20 ಕ್ರಿಕೆಟ್ ಪಂದ್ಯಾವಳಿಯ 18 ಆವೃತ್ತಿ ಇನ್ನೆನು ಮುಗಿಯಲು ಬಂತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಜೂನ್ 3 ರ ಫೈನಲ್ ಮುಗಿದರೆ ಪಂದ್ಯಾವಳಿ ಇತಿಹಾಸ ಪುಟ ಸೇರುತ್ತದೆ. ಪ್ರತಿ ಸಲದಂತೆ ಈ ಸಲವೂ ಐಪಿಎಲ್ ಪಂದ್ಯಾವಳಿ ಹಲವು ವಿಶೇಷತೆಗಳನ್ನು ಬಿಟ್ಟು ಕೊಟ್ಟಿತು. ಭಾರತ- ಪಾಕಿಸ್ತಾನ ಯುದ್ದದಿಂದ ಪಂದ್ಯಾವಳಿ ಕೆಲವು ದಿನಗಳವರೆಗೆ ಸ್ಥಗಿತವಾಗಿತ್ತು. ಆದರೆ ಯುದ್ದ ನಿಂತ ನಂತರ ಮತ್ತೆ ಪಂದ್ಯಾವಳಿ ಆರಂಭವಾಯಿತು.
ಒಂದೆರಡು ಪಂದ್ಯ ಮಳೆಯಿಂದ ಫಲಿತಾಂಶ ಕಾಣಲಿಲ್ಲ.ಯುದ್ದದ ಕಾರಣ ಮುಂಜಾಗೃತೆ ಕ್ರಮವಾಗಿ ಪಂದ್ಯವೊಂದು ರದ್ದಾಗಿರುವುದನ್ನು ಬಿಟ್ಟರೆ ಉಳಿದಂತೆ ಪಂದ್ಯಾವಳಿ ನಿರಾತಂಕವಾಗಿ ನಡೆಯಿತು. ಕ್ರಿಕೆಟ್ ಅಭಿಮಾನಿಗಳು ಹೊಡೆಬಡಿ ಆಟವನ್ನು ತುಂಬಾ ಎಂಜಾಯ್ ಮಾಡಿದರು. ಪ್ರತಿ ಬಾರಿಯಂತೆ ಈ ಬಾರಿಯೂ ದೊಡ್ಡ ಮೊತ್ತದ ಪಂದ್ಯಗಳು ಈ ಬಾರಿಯ ಪಂದ್ಯಾವಳಿಗೆ ಸಾಕ್ಷಿ ಒದಗಿಸಿದವು.
ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮತ್ತೆ ಹಲವು ಪ್ರತಿಭಾವಂತ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ 14 ರ ಪೋರ ಸೂರ್ಯವಂಶಿ ರಾಜಸ್ತಾನ ರಾಯಲ್ಸ್ ಪರ ಆಡಿ, ದಿನ ಬೆಳಗಾಗುವದರಲ್ಲಿ ಹೆಸರು ಮಾಡಿದ. 35 ಎಸೆತಗಳಲ್ಲಿ ಶತಕ ಸಿಡಿಸಿದ ಸೂರ್ಯವಂಶಿ ತನ್ನ ಪ್ರತಿಭೆಯನ್ನು ಐಪಿಎಲ್ ಮೂಲಕ ತೋರಿಸಿದರು.
ಗುಜರಾತ್ ಟೈಟನ್ಸ ಪರ ಆರಂಭ ಆಟಗಾರನಾಗಿ ಆಡಿದ ಸಾಯಿ ಸುದರ್ಶನ್ ನಿರಂತರ ರನ್ ಗಳಿಸಿ ತನ್ನ ಪ್ರತಿಭೆಯನ್ನು ವಿಶ್ವ ಕ್ರಿಕೆಟ್ ಗೆ ಪರಿಚಯ ಮಾಡಿಕೊಟ್ಟರು. ಅವರು 15 ಪಂದ್ಯಗಳಿಂದ 54.21 ರನ್ ಸರಾಸರಿಯಲ್ಲಿ 759 ರನ್ ಗಳಿಸಿದ್ದು, ಅವರ ಪ್ರತಿಭೆಗೆ ಸಾಕ್ಷಿ ಆಯಿತು. ಪಂಜಾಬ್ ಕಿಂಗ್ಸ್ ಪರ ಆರಂಭ ಆಟಗಾರನಾಗಿ ಆಡಿದ ಪ್ರಿಯಾನ್ಸ್ ಆರ್ಯ ತಮ್ಮ ಪ್ರತಿಭೆಯನ್ನು ಈ ಪಂದ್ಯಾವಳಿಯ ಮೂಲಕ ತೋರಿದರು. ಪ್ರಿಯಾನ್ಸ್ ಫೈನಲ್ ಗೆ ಮುನ್ನ ತಾನಾಡಿದ 16 ಪಂದ್ಯಗಳಿಂದ 28.19 ರನ್ ಗಳ ಸರಾಸರಿಯಲ್ಲಿ 451 ರನ್ ಗಳಿಸಿದ್ದು, ಎಡಗೈ ಆಟಗಾರ ವಿಶ್ವ ಕ್ರಿಕೆಟ್ ಜಗತ್ತನ್ನು ಗಮನ ಸೆಳೆದಿದ್ದಾರೆ. ತಿಲಕ್ ವರ್ಮಾ ಹಾಗೂ ಅಭಿಷೇಕ ಶರ್ಮಾ ಕೂಡ ಗಮನ ಸೆಳೆದ ಯುವ ಆಟಗಾರರು.
ಬೌಲಿಂಗ್ ನಲ್ಲಿ ಪ್ರಸಿದ್ದ ಕೃಷ್ಣ 25 ವಿಕೆಟ್ ಪಡೆದು ಯಶಸ್ವಿ ಬೌಲರ್ ಆದರೆ ಯುವ ಬೌಲರ್ ಗಳ ಪೈಕಿ ನೂರ್ ಅಹ್ಮದ್ 24, ಹಾಗೂ ಸಾಯಿ ಕಿಶೋರ್ 19 ವಿಕೆಟ್ ಪಡೆದು ಬೌಲಿಂಗ್ ಮೂಲಕ ಗಮನ ಸೆಳೆದರು. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಯುವ ಆಟಗಾರರನ್ನು ಬೆಳಕಿಗೆ ತಂದಿತು.




