ರೈಲಿನಿಂದ ಪ್ರಯಾಣಿಕರು ಯಾರೋ ಎಸೆದ ನೀರಿನ ಬಾಟಲೊಂದು ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕನ ಎದೆಗೆ ಬಡಿದು ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.
ರೈಲಿನಿಂದ ಪ್ರಯಾಣಿಕರು ಯಾರೋ ಎಸೆದ ನೀರಿನ ಬಾಟಲೊಂದು ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕನ ಎದೆಗೆ ಬಡಿದು ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. 14 ವರ್ಷದ ಬಾದಲ್ ಸಂತೋಷ್‌ಭಾಯ್ ಠಾಕೂರ್ ಮೃತ ಬಾಲಕ. ಈತ ತನ್ನ ಇನ್ನೊಬ್ಬ ಸ್ನೇಹಿತನ ಜೊತೆ ರೈಲ್ವೆ ಹಳಿ ಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ. ವರದಿಗಳ ಪ್ರಕಾರ ವೆರಾವಲ್-ಬಾಂದ್ರಾ ಟರ್ಮಿನಸ್ ರೈಲಿನ ಮೊದಲ ಬೋಗಿಯಲ್ಲಿದ್ದ ಪ್ರಯಾಣಿಕನೊಬ್ಬ ವೇಗವಾಗಿ ಬರುತ್ತಿದ್ದ ರೈಲಿನಿಂದ ರೈಲು ಹಳಿಗಳ ಕಡೆಗೆ ನೀರು ತುಂಬಿದ್ದ ಬಾಟಲನ್ನು ಎಸೆದಿದ್ದಾನೆ. ಅದು ಸೀದಾ ಬಂದು ಬಾಲಕನ ಎದೆಗೆ ಬಡಿದಿದೆ. ಇದರಿಂದ ಆತನಿಗೆ ಕೂಡಲೇ ಪ್ರಜ್ಞೆ ತಪ್ಪಿದ್ದು, ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಗುಜರಾತ್‌ನ ರಾಜ್‌ಕೋಟ್‌ನ ಶಾಪರ್-ವೆರಾವಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೈಲ್ವೆ ಟ್ರ್ಯಾಕ್ ಸಮೀಪದಲ್ಲಿದ್ದ ಗಾರ್ಡನ್‌ನಲ್ಲಿ ಕೆಲ ಕಾಲ ಆಟವಾಡಿದ ಬಾಲಕರು ಬಳಿಕ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ಬಂದಿದ್ದಾರೆ. ಈ ವೇಳೆ ಬಂದ ರೈಲಿನಿಂದ ಪ್ರಯಾಣಿಕನೊಬ್ಬ ಎಸೆದ ಬಾಟಲ್ ಬಾದಲ್ ಎದೆಗೆ ಬಿದ್ದು ಆತ ಸಾವನ್ನಪ್ಪಿದ್ದಾನೆ.
ರಾಜ್‌ಕೋಟ್‌ನ ವೆರಾವಲ್‌ನಿಂದ ಮುಂಬೈನ ಬಾಂದ್ರಾಗೆ ಹೋಗುತ್ತಿದ್ದ ರೈಲು ಇದಾಗಿತ್ತು. ವೇಗವಾಗಿ ಸಾಗುತ್ತಿದ್ದ ರೈಲಿನಿಂದ ಆತ ನೀರಿನ ಬಾಟಲನ್ನು ಎಸೆದಿದ್ದು, ಇದು ಟ್ರ್ಯಾಕ್ ಸಮೀಪ ಇದ್ದ ಬಾಲಕನ ಎದೆಗೆ ಬಂದು ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಶಾಪರ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿಗೆ ನಿಖರ ಕಾರಣ ಏನು ಎಂಬ ಬಗ್ಗೆ ತಿಳಿಯಲು ಯತ್ನಿಸಲಾಗಿದೆ.
ಬಾದಲ್ ಸಂತೋಷ್‌ಭಾಯ್ ಠಾಕೂರ್ ಪೋಷಕರಿಗೇ ಏಕೈಕ ಪುತ್ರನಾಗಿದ್ದು, ಮೂಲತಃ ಮಧ್ಯಪ್ರದೇಶದವರಾದ ಇವರು ಕೇವಲ 2 ವರ್ಷಗಳ ಹಿಂದೆ ಬ್ಯುಸಿನೆಸ್‌ನ ಕಾರಣಕ್ಕೆ ಗುಜರಾತ್‌ಗೆ ಬಂದಿದ್ದು, ಮೃತ ಬಾಲಕನ ತಂದೆ ಫ್ಯಾಬ್ರಿಕ್ ಉದ್ಯಮವನ್ನು ರಾಜ್‌ಕೋಟ್‌ನಲ್ಲಿ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಇಂತಹದ್ದೇ ಘಟನೆಯೊಂದು ಮುಂಬೈ ಲೋಕಲ್ ರೈಲಿನಲ್ಲಿ ನಡೆದಿತ್ತು, ರೈಲಿನ ಲೇಡಿಸ್ ಬೋಗಿಯೊಂದಕ್ಕೆ ಖಾಲಿಯಾದ ಮದ್ಯದ ಬಾಟಲನ್ನು ಯಾರೋ ಎಸೆದಿದ್ದರಿಂದ 18 ವರ್ಷದ ಯುವತಿಯೊಬ್ಬಳಿಗೆ ಬಂದು ಬಡಿದಿತ್ತು. ಆದರೆ ಆಕೆಗೆ ಏನು ಗಾಯಗಳಾಗಿರಲಿಲ್ಲ,ಮಾರ್ಚ್ 11ರಂದು ತಿತ್ವಾಲ್ ಲೋಕಲ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ರೈಲಿನ ಗೋಡೆಗೆ ಬಡಿದ ಮದ್ಯದ ಬಾಟಲ್ ಹಲವು ಚೂರುಗಳಾಗಿ ರೈಲಿನೊಳಗೆ ಬಿದ್ದಿತ್ತು.