ಹೊಸಪೇಟೆ: ನಮ್ಮಲ್ಲಿ ಬಣ ರಾಜಕೀಯವಿಲ್ಲ ನಾವೆಲ್ಲ ಒಂದೇ ಬಣ ಅದು ಕಾಂಗ್ರೆಸ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20 ರಂದು ನಡೆಯಲಿರುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮರ್ಪಣಾ ಸಮಾವೇಶದ ಪೂರ್ವ ಸಿದ್ದತೆ ಸಮಾವೇಶವನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಮಹಾಜನತೆ 2023 ಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದಾರೆ.
ಬಿಜೆಪಿ ಸರ್ಕಾರ ಕೇಂದ್ರದಲ್ಲಿದ್ರೂ, ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಅಪರಾ ವಿಶ್ವಾಸವಿಟ್ಟು 136 ಸ್ಥಾನ ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ. ಈಗ ಪಕ್ಷೇತರರು ಸೇರಿ 140 ಸ್ಥಾನಗಳು ಇವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ಮೇ 20 ರಂದು ಸರ್ಕಾರದ ಸಾಧನೆಯ 2 ವರ್ಷದ ಸಮಾವೇಶ ಮಾಡುತ್ತಿದ್ದೇವೆ. 5 ಗ್ಯಾರಂಟಿ ಅನುಷ್ಠಾನದ ಹಿನ್ನೆಲೆಯಲ್ಲಿ ನಾವು ಈಗಾಗಲೇ ರಾಜ್ಯದ ನಾನಾ ಭಾಗಗಳಲ್ಲಿ ಸಮಾವೇಶ ಮಾಡಿದ್ದೇವೆ. ಪಕ್ಷ ಸರ್ಕಾರ ಒಟ್ಟಿಗೆ ಸೇರಿ, ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಮಾವೇಶದಲ್ಲಿ ಕಂದಾಯ ಇಲಾಖೆಯಿಂದ 1 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದು, ಇದೊಂದು ಐತಿಹಾಸಿಕ ದಾಖಲೆಯಾಗಲಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ರಣದೀಪ್ ಸುರ್ಜೆವಾಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ಮಂತ್ರಿಗಳು ಭಾಗವಹಿಸಲಿದ್ದಾರೆ ಎಂದರು.




