ನಿಪ್ಪಾಣಿ: ಕೊಲ್ಲಾಪುರ ಜಿಲ್ಲೆಯ ಕಸಬಾ ಬಾವಡಾ ಗ್ರಾಮದ ಹರಿಭಕ್ತ ಪಾಂಡುರಂಗ ರಾಮಾ ಉಲಪೆ ವಯಸ್ಸು 65 ಎಂಬಾತ ಡಿಸೆಂಬರ್ 16ರಂದು ಪಾಂಡುರಂಗನ ನಾಮಸ್ಮರಣೆ ಮಾಡುವಾಗ ಹೃದಯಘಾತದಿಂದ ಕುಸಿದು ಬಿದ್ದ.ಹೊರಗಿನ ಕೋಣೆಯಲ್ಲಿ ಏನೋ ಸಪ್ಪಳವಾಗುತ್ತಿದ್ದಂತೆ ಪತ್ನಿ ಬಾಳಾಬಾಯಿ ಹೊರಗೆ ಬಂದು ನೋಡಲಾಗಿ ಬೆವರಿನಿಂದ ಬೆವೆತ ತನ್ನ ಪತಿ ಬಿದ್ದಿದ್ದನ್ನು ಕಂಡು ಪಕ್ಕದ ಮನೆಯವರ ಸಹಾಯದಿಂದ ತಕ್ಷಣ ಕೊಲ್ಲಾಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ರಾತ್ರಿ 11 ಗಂಟೆಯವರೆಗೆ ಚಿಕಿತ್ಸೆ ನೀಡಿದ ವೈದ್ಯರು ಕೊನೆಗೆ 11:30 ಕ್ಕೆ ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಸಿದರು. ಇತ್ತ ಗ್ರಾಮದಲ್ಲಿ ಹರಿಭಕ್ತ ಪಾಂಡುರಂಗ ಮೃತಪಟ್ಟಿದ್ದ ಸುದ್ದಿ ಹರಡುತ್ತಿದ್ದಂತೆ ಮೃತರ ಅಂತ್ಯ ವಿಧಿಗಾಗಿ ಗ್ರಾಮಸ್ಥರೆಲ್ಲರೂ ಕೂಡಿ ಚಟ್ಟ ಕಟ್ಟಿ ಸಿದ್ದರಾಗಿದ್ದರು.
ಕುಟುಂಬಸ್ಥರು ಬೀಗರು ಅಂತ್ಯಕ್ರಿಯೆಗಾಗಿ ಆಗಮಿಸಿದ್ದರು. ಆ .ದ .ರೇ.. . ಇತ್ತ ಕೊಲ್ಲಾಪುರದಿಂದ ಕಸಬಾ ಭಾವಡಾ ಗ್ರಾಮಕ್ಕೆ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ತರುವಾಗ ತಗ್ಗು ಗುಂಡಿಗಳ ಮಧ್ಯೆ ಬರುತ್ತಿರುವಾಗ ವಾಹನದ ಜಿಗಿತದಿಂದ ಮೃತ ವ್ಯಕ್ತಿಗೆ ಉಸಿರಾಟ ಪ್ರಾರಂಭವಾಯಿತು. ತಕ್ಷಣ ಕುಟುಂಬಸ್ಥರು ಪಾಂಡುರಂಗ ಜೀವಂತವಾಗಿರುವುದಾಗಿ ತಿಳಿದು, ಸಮೀಪದ ಕದಂ ವಾಡಿ ಆಸ್ಪತ್ರೆಗೆ ಪಾಂಡುರಂಗನನ್ನು ದಾಖಲಿಸಿದರು. ಇದೇ ವೇಳೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದ ಪಾಂಡುರಂಗನಿಗೆ ಪ್ರಜ್ಞೆ ಬಂತು. ಆತ್ಮವಿಶ್ವಾಸ ಹೆಚ್ಚಾಗಿ ಸ್ವತಃ ಎದ್ದು ನಿಂತರು. ತದನಂತರ ಬರೋಬ್ಬರಿ 15 ದಿನಗಳ ನಂತರ ಮನೆಗೆ ಆಗಮಿಸಿದ್ದು ಇಡೀ ಕುಟುಂಬಸ್ಥರು ಆರತಿ ಬೆಳಗಿ ಮನೆಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಇಡೀ ಗ್ರಾಮದ ಜನರು ಪುನರ್ಜನ್ಮ ಪಡೆದ ಪಾಂಡುರಂಗನನ್ನು ನೋಡಲು ಜನದಟ್ಟಣೆ ಮಾಡಿದ್ದರು.ಇದೇನೂ ಸಿನೆಮಾ ದೃಶ್ಯವಲ್ಲ ಕೊಲ್ಲಾಪುರ ಜಿಲ್ಲೆಯ ಕಸಬಾ ಬಾವಡಾ ಗ್ರಾಮದಲ್ಲಿ ನಡೆದ ಸತ್ಯ ಘಟನೆ. ಸದ್ಯ ಪಾಂಡುರಂಗ ಕಾಕಾ ಮತ್ತೆ ಎಂದಿನಂತೆ ಅಚ್ಚುಕಟ್ಟಾಗಿದ್ದಾನೆ. ಎದ್ದು ಓಡಾಡುತ್ತಿದ್ದಾನೆ.
ಮಹಾವೀರ ಚಿಂಚಣೆ