ಬೆಳಗಾವಿ : ಹಣಕಾಸು ಇಲಾಖೆಯಿಂದ ಬಿಡುಗಡೆ ಆಗಿರುವ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು ಎಂಬ ವಿಪಕ್ಷಗಳ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 5 ಸಾವಿರ ಕೋಟಿ ಹಣ ಬಿಡುಗಡೆಯೇ ಆಗಿಲ್ಲ. ಅಂದಮೇಲೆ ಅದು ಎಲ್ಲಿ ಹೋಗುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರವು ಬುಧವಾರ ವಿಧಾನಸಭೆಯಲ್ಲಿ ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿತ್ತು.
ಕೊನೆಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆ ಕೇಳಿದ್ದರು. ಅಲ್ಲದೆ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವರು ಒಪ್ಪಿಕೊಂಡಿದ್ದರು.
ಆರ್ಥಿಕ ಇಲಾಖೆಯಿಂದ ಪ್ರತಿ ಒಂದನೇ ತಾರೀಖು ದುಡ್ಡು ಬಿಡುಗಡೆ ಆಗುತ್ತದೆ. ಹಣ ಬಿಡುಗಡೆ ಆದ ತಕ್ಷಣವೇ ಗೃಹ ಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳುಗಳ ಹಣ ಬಿಡುಗಡೆ ಹೆಚ್ಚು ಕಮ್ಮಿ ಆಗಿದ್ದರೆ, ಹಣಕಾಸು ಸಚಿವರು ಮುಖ್ಯಮಂತ್ರಿಗಳೇ ಇದ್ದಾರೆ. ಸದನದಲ್ಲಿ ಅವರೇ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು




