ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದೇವರಾಜು ಅರಸು ದಾಖಲೆ ಮುರಿಯುತ್ತಾರಂತೆ. ಯಾವ ಭಾಗ್ಯಕ್ಕೆ ಇದೆಲ್ಲಾ? ರಾಜ್ಯದ ಪರಿಸ್ಥಿತಿ ನೋಡಿದರೆ ಈ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಕರ್ನಾಟಕದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇನೆ ಎಂಬುದಾಗಿ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು, ಕೆಟ್ಟ ಆಡಳಿತಕ್ಕೆ ನಿದರ್ಶನ.ಅವರ ಆಡಳಿತದ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದ ಕರ್ನಾಟಕ ಇಂದು ಅದಕ್ಷ, ಕೆಟ್ಟ ಆಡಳಿತಕ್ಕೆ ನಿದರ್ಶನ ಆಗಿದೆ. ದೇವರಾಜು ಅರಸು ಎಲ್ಲಿ? ಇವರಲ್ಲಿ? ಅರಸು ಅವರ ದಾಖಲೆ ಮುರಿಯುವುದು ಇರಲಿ, ರಾಜ್ಯದಲ್ಲಿ ಇವರೇ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ.
ಕಾಂಗ್ರೆಸ್ಸಿಗೆ ಮತದಾರರು ಬುದ್ಧಿ ಕಲಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂಬುದಾಗಿ ಹೇಳಿಕೊಳ್ಳುವ ಇವರಿಗೆ ಮತದಾರರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.




