ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡದ ಆಟಗಾರರು ಬಿಳಿ ಬ್ಲೇಜರ್‌ಗಳನ್ನು ಧರಿಸಿ ಕಾಣಿಸಿಕೊಂಡಿದ್ದರು.
ಬೇರೆ ಯಾವುದೇ ಐಸಿಸಿ ಆಯೋಜಿತ ಪಂದ್ಯಾವಳಿಯಲ್ಲಿ ಬಿಳಿ ಬ್ಲೇಜರ್‌ಗಳನ್ನು ಧರಿಸುವ ಸಂಪ್ರದಾಯವಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಗೆಲ್ಲುವ ತಂಡಕ್ಕೆ ಬಿಳಿ ಬ್ಲೇಜರ್ ಏಕೆ ನೀಡಲಾಗುತ್ತದೆ ಎಂದು ಹೆಚ್ಚಿನ ಜನರು ಹುಡುಕಾಟ ನಡೆಸಿದ್ದಾರೆ. ಅದರ ಬಗ್ಗೆ ಇದೀಗ ತಿಳಿದುಕೊಳ್ಳಣ.
ವೈಟ್ ಬ್ಲೇಜರ್ ಏಕೆ ನೀಡಲಾಗುತ್ತದೆ?: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿಯು 1998ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯಿತು. ಆಗ ಗೆದ್ದ ತಂಡಕ್ಕೆ ಯಾವುದೇ ರೀತಿಯ ಬ್ಲೇಜರ್ಗಳು ಅಥವಾ ಜಾಕೇಟ್ ನೀಡಲಾಗುತ್ತಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಆವೃತ್ತಿಯಲ್ಲಿ ಬಿಳಿ ಬ್ಲೇಜರ್ ಅನ್ನು ಪರಿಚಯಿಸಲಾಯಿತು. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು. ಆಗ ತಂಡದ ಸದಸ್ಯರಿಗೆ ಬಿಳಿ ಬಣ್ಣದ ಜಾಕೇಟ್ ನೀಡಲಾಗಿತ್ತು. ವಾಸ್ತವಾಗಿ ಈ ಜಾಕೇಟ್ ಅನ್ನು ಗೆದ್ದಿರುವ ಪಂಡಕ್ಕೆ ಗೌರವದ ಸಂಕೇತವಾಗಿ ನೀಡಲಾಗುತ್ತದೆ.
ಐಸಿಸಿ ಸ್ಪಷ್ಟನೆ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ “ಬಿಳಿ ಜಾಕೆಟ್ ವಿಜೇತ ತಂಡಕ್ಕೆ ನೀಡುವ ಗೌರವದ ಸಂಕೇತವಾಗಿದೆ. ಜೊತೆಗೆ ಮುಂದಿನ ಪೀಳಿಗೆಗೆ ಮಾದರಿಯಾಗಲು ಇದನ್ನು ನೀಡಲಾಗುತ್ತದೆ. ಇದು ಚಾಂಪಿಯನ್ಗಳು ಧರಿಸುವ ಗೌರವದ ಬ್ಯಾಡ್ಜ್ ಆಗಿದೆ ಎಂದು ತಿಳಿಸಿದೆ.



