ಬೆಳಗಾವಿ : ರಾಜ್ಯ ರಾಜಕಾರಣದಲ್ಲಿನ ನವೆಂಬರ್ ಕ್ರಾಂತಿ ಚರ್ಚೆ, ಸಿಎಂ ಬದಲಾವಣೆ ಸೇರಿ ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು,ಅವರ ಪಕ್ಷದ ಆಂತರಿಕ ಸಮಸ್ಯೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು.ಕರ್ನಾಟಕ ಕಾಂಗ್ರೆಸ್ ನಲ್ಲಿ ಯಾರು ಕೂಡ ಏಕನಾಥ ಸಿಂಧೆ, ಅಜಿತ್ ಪವಾರ್ ಆಗಲ್ಲ ಎಂದಿದ್ದಾರೆ.
ನನ್ನ ಅನಿಸಿಕೆಯಲ್ಲಿ ಮುಂದಿನ ಎರಡೂವರೆ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರಿದ್ರೆ ನಮಗೆ ಅನುಕೂಲ ಆಗಲಿದೆ. ನಾವು ವಿರೋಧ ಪಕ್ಷದ ಕೆಲಸವನ್ನ ಸರಿಯಾಗಿ ಮಾಡಬೇಕಿದೆ.
ಪ್ರತಿನಿತ್ಯ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವನ್ನು ನಾವು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ ಸ್ವಪಕ್ಷದ ವಿರುದ್ಧವೇ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಕ್ರಾಂತಿ ಆಗಲ್ಲ. ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲಾ ನಾಯಕರು ಕೂಡ ಬದ್ಧರಾಗಿದ್ದೇವೆ.
ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ ಅಥವಾ ಯಾರು ಬೇಕಾದ್ರೂ ಸಿಎಂ ಆಗಲಿ. ನಮಗೆ ವಿಪಕ್ಷವಾಗಿ ಹೋರಾಟ ಮಾಡಲು ಸಾಕಷ್ಟು ವಿಷಯಗಳಿವೆ ಎಂದಿದ್ದಾರೆ.




