Ad imageAd image

ಏನಿಗದಲೆ ಸ್ಮಶಾನ ಭೂಮಿ ವಿವಾದ: ನೂರು ವರ್ಷಗಳ ಜಾಗಕ್ಕೂ ಮುಳ್ಳಿನ ಅವ್ಯವಸ್ಥೆ

Bharath Vaibhav
ಏನಿಗದಲೆ ಸ್ಮಶಾನ ಭೂಮಿ ವಿವಾದ: ನೂರು ವರ್ಷಗಳ ಜಾಗಕ್ಕೂ ಮುಳ್ಳಿನ ಅವ್ಯವಸ್ಥೆ
WhatsApp Group Join Now
Telegram Group Join Now

ಕಡತ ದೋಷದಿಂದ ಮಂಜೂರಾತಿ ವಿಳಂಬ; ಚೇಳೂರು ತಹಸೀಲ್ದಾರ್ ಕಚೇರಿಯತ್ತ ಗ್ರಾಮಸ್ಥರ ದೃಷ್ಟಿ

ಚೇಳೂರು: ನೂತನ ಚೇಳೂರು ತಾಲೂಕಿನ ಏನಿಗದಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದವರು ಸುಮಾರು ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಬಳಸುತ್ತಿದ್ದ ಸ್ಮಶಾನ ಭೂಮಿಗೆ ಇದುವರೆಗೂ ಅಧಿಕೃತ ಮಂಜೂರಾತಿ ದೊರಕದ ಕಾರಣ, ಸ್ಥಳವು ನಿರ್ವಹಣೆ ಇಲ್ಲದೆ ಮುಳ್ಳಿನ ಗಿಡಗಳು ಮತ್ತು ಪೊದೆಗಳಿಂದ ಸಂಪೂರ್ಣ ಆವೃತವಾಗಿದೆ. ಡಿ. 10 ರಂದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಕಡತದ ವಿಳಂಬ ಮತ್ತು ಸ್ಮಶಾನದ ಅವ್ಯವಸ್ಥೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿಗದಲೆ ಗ್ರಾಮವು ಈ ಹಿಂದೆ ಚಿಂತಾಮಣಿ ತಾಲೂಕಿನ ವ್ಯಾಪ್ತಿಯಲ್ಲಿತ್ತು. ಗ್ರಾಮಸ್ಥರಾದ ಬಾಬು ಅವರ ಆರೋಪದ ಪ್ರಕಾರ, ಸ್ಮಶಾನ ಭೂಮಿ ಮಂಜೂರಾತಿಗಾಗಿ ಸತತ ಮೂರು ವರ್ಷಗಳಿಂದ ಚಿಂತಾಮಣಿ ತಹಸೀಲ್ದಾರ್ ಕಚೇರಿಗೆ ಅರ್ಜಿಗಳನ್ನು ನೀಡಲಾಗಿದ್ದು, ಕೇವಲ ಸರ್ವೇ ನಡೆಸಿ ಸ್ಕೆಚ್ ಹಾಕಿ ಕೊಡಲಾಗಿತ್ತು.

ಗ್ರಾಮಸ್ಥರ ಪ್ರಕಾರ, ಈ ಕಡತವು ಉಪವಿಭಾಗಾಧಿಕಾರಿ (AC) ಕಚೇರಿಗೆ ತಲುಪಿದಾಗ, ದಾಖಲೆಗಳಲ್ಲಿನ ಲೋಪದ ಕಾರಣಕ್ಕೆ ವಾಪಸ್ ಬಂದಿರುವುದು ವಿಳಂಬಕ್ಕೆ ಮುಖ್ಯ ಕಾರಣವಾಗಿದೆ. ಕೇವಲ ಸ್ಕೆಚ್ ಮಾತ್ರ ದೊರೆತಿದ್ದು, ಇಲ್ಲಿಯವರೆಗೂ ಜಾಗವನ್ನು ಹದ್ದುಬಸ್ತು ಮಾಡಿ ಗುರುತಿಸದಿರುವ ಕಾರಣ, ಪಕ್ಕದ ಜಮೀನು ಮಾಲೀಕರು ಅಂತ್ಯಸಂಸ್ಕಾರಕ್ಕೆ ತಕರಾರು ಮಾಡುತ್ತಿದ್ದಾರೆ.

ಈ ವಿವಾದದಿಂದಾಗಿ ಜಾಗವು ಹಾಗೆಯೇ ಉಳಿದು, ಸ್ಮಶಾನ ಭೂಮಿ ಸಂಪೂರ್ಣ ಮುಳ್ಳಿನ ಪೊದೆಗಳಿಂದ ಆವರಿಸಿದೆ. ಯಾರಾದರೂ ಸತ್ತರೆ, ಪೊದೆಗಳನ್ನು ತೆರವುಗೊಳಿಸಿ ಹೂಳಲು ಸಹ ತುಂಬಾ ಕಷ್ಟಪಡುವಂತಾಗಿದೆ. ಈ ಅವ್ಯವಸ್ಥೆ ನಮಗೆ ತೀವ್ರ ನೋವುಂಟು ಮಾಡಿದೆ ಎಂದು ಗ್ರಾಮಸ್ಥರು ಡಿ. 10 ರಂದು ಹೇಳಿಕೆ ನೀಡಿದ್ದಾರೆ.

ನೂತನ ಆಡಳಿತಕ್ಕೆ ಮನವಿ : ಈಗ ಏನಿಗದಲೆ ಗ್ರಾಮವು ನೂತನ ಚೇಳೂರು ತಾಲೂಕಿಗೆ ಸೇರಿರುವುದರಿಂದ, ವಿವಾದಿತ ಸರ್ವೇ ನಂಬರ್‌ಗಳಾದ 8/20, 124, 123 ಮತ್ತು 125 ರ ಜಾಗಗಳನ್ನು ಚೇಳೂರು ತಹಸೀಲ್ದಾರ್ ರವರು ಆದರೂ ಕೂಡಲೇ ಪರಿಶೀಲಿಸಿ, ಮಂಜೂರು ಮಾಡಿ, ಹದ್ದುಬಸ್ತು ಗುರುತಿಸಿ, ಸ್ಮಶಾನ ಭೂಮಿಯನ್ನು ಬಳಸಲು ಅನುಕೂಲ ಮಾಡಿಕೊಡಬೇಕು ಎಂದು ಇಬ್ರಾಹಿಮ್,ಶಮೀರ್,ಶಬ್ಬೀರ್,ಪಾಕೀರ್ ಸಾಬ್, ಬಾಷಾ,ಬಾಬು, ಸೈದುಲ, ಅವರು ಮನವಿ ಮಾಡಿದ್ದಾರೆ.

ಕಂದಾಯ ಇಲಾಖೆಯು ಕಡತದ ಲೋಪವನ್ನು ಸರಿಪಡಿಸಿ, ಈ ನೂರು ವರ್ಷಗಳ ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!