ವಿಶಾಖಪಟ್ಟಣ: ಅಶುತೋಷ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ರೋಚಕ ಜಯ ದಾಖಲಿಸಿತು. ಈ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ಶುಭಾರಂಭ ಮಾಡಿತು.
ಸೋಮವಾರ ವಿಶಾಖಪಟ್ಟಣದ ವೈ.ಎಸ್.ರಾಜಶೇಖರ್ ರೆಡ್ಡಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ರೋಚಕವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಲಖನೌ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ಗಳ ಬೃಹತ್ ಗುರಿ ನೀಡಿತು. ದೆಹಲಿ ಕ್ಯಾಪಿಟಲ್ಸ್ 19.3 ಓವರುಗಳಲ್ಲಿ 9 ವಿಕೆಟ್ ಗೆ 211 ರನ್ ಗಳಿಸಿ ಜಯದ ನಗೆ ಬೀರಿತು.
ಆಪತ್ಬಾಂಧವ ಅಶುತೋಷ್: ಕೆಳ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅಶುತೋಷ್ ಕ್ರೀಸ್ನಲ್ಲಿ ಭದ್ರವಾಗಿ ನಿಂತು ತಂಡಕ್ಕೆ ಜಯ ಕೊಂಡೊಯ್ದರು. 31 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ನೆರವಿನಿಂದ 66 ರನ್ ಗಳಿಸಿ ತಂಡಕ್ಕೆ ಆಪತ್ಭಾಂಧವರಾದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಪರ ಮಿಚೆಲ್ ಮಾರ್ಶ್ (76 ರನ್, 36 ಎಸೆತಗಳಲ್ಲಿ 6 ಸಿಕ್ಸರ್, 6 ಬೌಂಡರಿ), ಪೂರನ್ (75 ರನ್, 30 ಎಸೆತಗಳಲ್ಲಿ 7 ಸಿಕ್ಸರ್, 6 ಬೌಂಡರಿ) ಸ್ಫೋಟಕ ಬ್ಯಾಟಿಂಗ್ ಮಾಡಿದ್ದರಿಂದ ತಂಡ ಬೃಹತ್ ಮೊತ್ತ ಪೇರಿಸಿತ್ತು.