ಬೆಂಗಳೂರು/ವಿಜಯಪುರ : ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ ಶ್ರೀಗಳು, ಇದು ತಮ್ಮ ತೇಜೋವಧೆ ಮಾಡಲು ನಡೆಯುತ್ತಿರುವ ವ್ಯವಸ್ಥಿತ ಸಂಚು ಎಂದು ಕಿಡಿಕಾರಿದ್ದಾರೆ.
3 ಕೋಟಿ ರೂಪಾಯಿ ನೀಡದಿದ್ದರೆ ಸುಳ್ಳು ಆರೋಪ ಮಾಡುವುದಾಗಿ ಮಹಿಳೆ ಬ್ಲಾಕ್‌ಮೇಲ್ ಮಾಡುತ್ತಿದ್ದಳು’ ಎಂದು ಆರೋಪಿಸಿರುವ ಸ್ವಾಮೀಜಿ, ಸಂತ್ರಸ್ತೆ ಎನ್ನಲಾದ ಮಹಿಳೆಯ ವಿರುದ್ಧವೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದು, ಸದ್ಯ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಮೇಲೆ ಬೆಂಗಳೂರಿನ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ.
ಸ್ವಾಮೀಜಿ ತಮ್ಮ ಮೇಲೆ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಬೆತ್ತಲೆ ವಿಡಿಯೋ ಕಾಲ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸ್ವಾಮೀಜಿ ಪ್ರತಿದೂರು : ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಸ್ವಾಮೀಜಿ, ಮಹಿಳೆಯ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.
3 ಕೋಟಿ ಬ್ಲಾಕ್‌ಮೇಲ್ ಆರೋಪ: ಮಹಿಳೆಯು ಅನಾಥಾಶ್ರಮದ ಹೆಸರಿನಲ್ಲಿ ಪರಿಚಯ ಮಾಡಿಕೊಂಡು, ನಂತರ ಹಣಕ್ಕಾಗಿ ಒತ್ತಡ ಹೇರುತ್ತಿದ್ದಳು.
ಈಗ ತನ್ನ ತೇಜೋವಧೆ ಮಾಡಲು ಸಂಚು ರೂಪಿಸಿ 3 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.
ಸಂಚಿನ ಶಂಕೆ: ಕೆಲವು ರಾಜಕೀಯ ವ್ಯಕ್ತಿಗಳ ಪ್ರಚೋದನೆಯಿಂದ ತಮ್ಮ ವಿರುದ್ಧ ಇಂತಹ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಶ್ರೀಗಳು ಆರೋಪಿಸಿದ್ದಾರೆ.
ಅಲ್ಲದೆ, ತಾವು ಮಠಕ್ಕೆ ತೆರಳುವಾಗ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಲು ಪ್ರಯತ್ನಿಸಲಾಗಿತ್ತು ಎಂಬ ಗಂಭೀರ ವಿಷಯವನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪರಸ್ಪರ ವಿರುದ್ಧ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಕೈಗೆತ್ತಿಕೊಂಡಿದ್ದಾರೆ.




