ಸಾಕು ಪ್ರಾಣಿಗಳಿಂದಲೇ ಮನೆಯವರು ಬಲಿಯಾದ ಘಟನೆ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವುದು ಕೇಳಿದ್ದೇವೆ. ಆದರೆ ಮನೆಯಲ್ಲಿ ಸಾಕಿದ ಬೆಕ್ಕು ಮನೆಯ ಯಜಮಾನಿಯ ಜೀವ ತೆಗೆದ ಘಟನೆ ಕೇಳಿದ್ದೀರಾ? ಹೌದು ಅಂತಹದ್ದೊಂದು ಘಟನೆ ಮಲೆನಾಡು ಶಿವಮೊಗ್ಗದಲ್ಲಿ ನಡೆದಿದೆ.
ಸಾಮಾನ್ಯವಾಗಿ ಬೆಕ್ಕು ಕಚ್ಚಿ ಸಾಯುವ ಪ್ರಕರಣಗಳು ಅಪರೂಪ.ಆದರೆ ಬೆಕ್ಕು ಕಚ್ಚಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ತರಲಘಟ್ಟದಲ್ಲಿ ನಡೆದಿದ್ದು, ಗಂಗೀಬಾಯಿ (50) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಬೆಕ್ಕು ಮಹಿಳೆಗೆ ಮಾತ್ರವಲ್ಲ, ನಾಯಿಮರಿಯನ್ನೂ ಕಚ್ಚಿ ಗಾಯಗೊಳಿಸಿದೆ. ಅಲ್ಲದೇ ಅದೇ ತರಲಘಟ್ಟದ ಕ್ಯಾಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೂ ಕಚ್ಚಿದ್ದು, ಆತ ಆಯುರ್ವೆದ ಸೂಕ್ತ ಚಿಕಿತ್ಸೆ ಪಡೆದು ಪಾರಾಗಿದ್ದಾನೆ.
ಕ್ಯಾಂಪ್ ನಲ್ಲಿ ಬೆಕ್ಕು ಸಾಕಿದ್ದ ಗಂಗೀಬಾಯಿ ಬೆಕ್ಕು ಕಚ್ಚಿದ್ದರಿಂದ ರೇಬಿಸ್ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆಯಲು ನಿರ್ಲಕ್ಷಿಸಿದ್ದರಿಂದ ಮೃತಪಟ್ಟಿದ್ದಾರೆ.
ಮಹಿಳೆ ಕಾಲಿಗೆ ಕಚ್ಚಿದ ಕಾರಣ ರೇಬಿಸ್ ತಗಲಬಹುದು ಎಂಬ ಕಾರಣಕ್ಕೆ ವೈದ್ಯರು 5 ಇಂಜೆಕ್ಷನ್ ಪಡೆಯಲು ಸೂಚಿಸಿದ್ದರು. ಆದರೆ ಗಂಗೀಬಾಯಿ ಒಂದು ಇಂಜೆಕ್ಷನ್ ಪಡೆದ ನಂತರ ಚೇತರಿಕೆ ಕಂಡಿದ್ದಾರೆ. ಇದರಿಂದ ಉಳಿದ 4 ಇಂಜೆಕ್ಷನ್ ಪಡೆಯದೇ ನಿರ್ಲಕ್ಷಿಸಿದ್ದರು.
ಅಲ್ಲದೇ ಅನಾರೋಗ್ಯದ ನಡುವೆಯೂ ಗದ್ದೆಯಲ್ಲಿ ಮಳೆಯ ನಡುವೆ ನಾಟಿ ಕೆಲಸಕ್ಕೆ ಮುಂದಾಗಿದ್ದರಿಂದ ಏಕಾಏಕಿ ರೇಬಿಸ್ ರೋಗ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂದು ಮೃತ ಮಹಿಳೆಯ ಅಳಿಯ ಘಟನೆಯನ್ನು ವಿವರಿಸಿದ್ದಾರೆ.
ರೇಬಿಸ್ ರೋಗ ನಾಯಿ ಕಚ್ಚಿದರೆ ಮಾತ್ರ ಬರುವುದಿಲ್ಲ. ಬೆಕ್ಕಿನಿಂದಲೂ ಬರುತ್ತದೆ. ಆದ್ದರಿಂದ ನಾಯಿ-ಬೆಕ್ಕು ಸಾಕುವಾಗ ವೈದ್ಯರಿಗೆ ಚುಚ್ಚುಮದ್ದು ಹಾಕಿಸಿ ಸುರಕ್ಷತೆ ಕಾಪಾಡಿಕೊಳ್ಳುವುದು ಒಳ್ಳೆಯದು ಎಂದು ಡಿಹೆಚ್ ಒ ಎಚ್ಚರಿಸಿದ್ದಾರೆ.