ವಿಜಯಪುರ: ನಗರದಲ್ಲಿ ಮಾನವೀಯತೆಯನ್ನು ನಾಚಿಕೆಪಡಿಸುವಂತಹ ಭೀಕರ ಘಟನೆ ಬೆಳಕಿಗೆ ಬಂದಿದೆ. ನಗರದ ದಿವಟಗೇರಿ ಗಲ್ಲಿಯಲ್ಲಿ ಡಿಸೆಂಬರ್ 26ರಂದು ಸಂಜೆ, ಹಾಲು ತರಲೆಂದು ಅಂಗಡಿಗೆ ಹೊರಟಿದ್ದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ, ಕಿವಿಯನ್ನು ಕತ್ತರಿಸಿ ಕಿವಿಯೋಲೆ ಹಾಗೂ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಕಲಾವತಿ ಗಾಯ್ಕವಾಡ್ (45) ಎಂದು ಗುರುತಿಸಲಾಗಿದ್ದು, ಮನೆ ಸಮೀಪದಲ್ಲೇ ಈ ದಾರುಣ ಘಟನೆ ನಡೆದಿದೆ.
ಆರೋಪಿಗಳು ಮುಸುಕುಧಾರಿಗಳಾಗಿ ಬಂದಿದ್ದು, ಮೊದಲು ಮಹಿಳೆಗೆ ಪರಿಚಿತರಂತೆ ಮಾತನಾಡಿ, ನಂತರ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಹಿಳೆಯ ಮಗನ ಸ್ನೇಹಿತರೆಂದು ಹೇಳಿಕೊಂಡು ಹತ್ತಿರವಾದ ದುಷ್ಕರ್ಮಿಗಳು, ಆಕೆಯ ಮೇಲೆ ಅಮಾನುಷವಾಗಿ ದಾಳಿ ಮಾಡಿ ಸುಮಾರು 10 ಗ್ರಾಂ ಮಾಂಗಲ್ಯ ಸರ ಹಾಗೂ 1 ಗ್ರಾಂ ಕಿವಿಯೋಲೆ ಕದ್ದುಕೊಂಡು ಪರಾರಿಯಾಗಿದ್ದಾರೆ.
ಹಲ್ಲೆಯ ವೇಳೆ ಮಹಿಳೆಯ ಒಂದು ಕಿವಿಯನ್ನು ಕತ್ತರಿಸಿರುವುದರಿಂದ ಭಾರೀ ರಕ್ತಸ್ರಾವವಾಗಿದ್ದು, ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃದ್ಯರು ಗಾಯಗೊಂಡ ಕಿವಿಗೆ ಮೂರು ಸ್ಟಿಚ್ ಹಾಕಿದ್ದು, ಬಾಯಿಗೆ ಗುದ್ದಿದ ಪರಿಣಾಮ ಹಲ್ಲು ನೋವು ಕೂಡ ಉಂಟಾಗಿದೆ ಎಂದು ಕಲಾವತಿ ಗಾಯ್ಕವಾಡ್ ತಿಳಿಸಿದ್ದಾರೆ.




