————————————————–ಆರಕ್ಷಕ ಠಾಣೆಯಲ್ಲಿ ಇನ್ನರ್ ವೀಲ್ ಸ್ವಾತಂತ್ರ್ಯ ಸಂಭ್ರಮ
ತುರುವೇಕೆರೆ: ಪ್ರಸ್ತುತ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಲ್ಲೆಡೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪೊಲೀಸರು ದೇಶದೊಳಗಿನ ಯೋಧರು ಎಂದು ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾಪ್ರಭಾಕರ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆರಕ್ಷಕ ಸಿಬ್ಬಂದಿ ಸಹೋದರರಿಗೆ ರಕ್ಷಾಬಂಧನ ಕಟ್ಟಿ, ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಗಡಿಯಲ್ಲಿ ನಿಂತಿರುವ ಯೋಧರು ಒಂದೆಡೆಯಾದರೆ, ನಾಗರೀಕರ ಸುರಕ್ಷತೆಗೆ ಹಳ್ಳಿ, ನಗರದಲ್ಲಿ ಶ್ರಮಿಸುತ್ತಿರುವ ಪೊಲೀಸರು ಸಹ ಸೈನಿಕರೇ ಆಗಿದ್ದಾರೆ. ಪೊಲೀಸರು ಇಲ್ಲದಿದ್ದರೆ ಕಳ್ಳತನ, ದರೋಡೆ, ಕೊಲೆ, ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಹತ್ತಾರು ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚು ನಡೆಯುತ್ತಿದ್ದವು. ಪೊಲೀಸರು ಇರುವುದರಿಂದಲೇ ನಾಗರೀಕರು ಶಾಂತಿ, ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಸಿಪಿಐ ಲೋಹಿತ್ ಮಾತನಾಡಿ, ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಠಾಣೆಯಲ್ಲಿ ಆಚರಿಸುತ್ತಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಸಂಘಸಂಸ್ಥೆಯೊಂದು ಪೊಲೀಸರ ಜೊತೆಗೂಡಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲು ಬಂದಿರುವುದು ಖುಷಿ ತಂದಿದೆ. ಇನ್ನರ್ ವೀಲ್ ಕ್ಲಬ್ ನ ಸಹೋದರಿಯರು ಪೊಲೀಸ್ ಸಿಬ್ಬಂದಿಗೆ ರಕ್ಷಾಬಂಧನ ಕಟ್ಟುವ ಮೂಲಕ ಸಹೋದರತೆಯ ಸಂದೇಶವನ್ನು ಸಾರಿದ್ದಾರೆ. ಸಹೋದರಿಯೊಂದಿಗೆ ರಾಷ್ಟ್ರೀಯ ಹಬ್ಬವನ್ನು ಆಚರಿಸಿದ್ದು ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಮೂರ್ತಿ, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಕಾರ್ಯದರ್ಶಿ ಮಮತಾ ಅಶೋಕ್, ಪದಾಧಿಕಾರಿಗಳಾದ ಮಧುಶ್ರೀ, ಕಾವ್ಯ, ಆಶಾರಾಜಶೇಖರ್, ಶೋಭಾ, ಸುಗುಣ, ಉಮಾಕುಮಾರ್, ಶಿವಗಂಗಾ ಸೇರಿದಂತೆ ಆರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




