ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಆಕರ್ಷಕ ಅರ್ಧಶತಕದ ಫಲವಾಗಿ ಮುಂಬೈ ಇಂಡಿಯನ್ಸ್(MI) ತಂಡ ಇಲ್ಲಿನ ಬ್ರಬೊರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್(WPL) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿತು. ಡೆಲ್ಲಿ 8 ರನ್‌ಗಳಿಂದ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಎಡವಿತು.
44 ಎಸೆತಗಳಲ್ಲಿ 66 ರನ್ ಪೇರಿಸಿದ ಹರ್ಮನ್‌ಪ್ರೀತ್ ಕೌರ್ ಫೈನಲ್ ಪಂದ್ಯಕ್ಕಾಗಿಯೇ ತಮ್ಮ ಆಟವನ್ನು ಮೀಸಲಿಟ್ಟಂತಿತ್ತು. ಏಕೆಂದರೆ, ಮುಂಬೈ ಪಂದ್ಯ ಗೆಲ್ಲುವಲ್ಲಿ ಅವರ ಕೊಡುಗೆ ನಿರ್ಣಾಯಕವಾಯಿತು. ತಂಡದ ಉಳಿದ ಬ್ಯಾಟರ್‌ಗಳು ವಿಫಲರಾದಾಗ 149 ರನ್ ಟಾರ್ಗೆಟ್ ನೀಡುವಲ್ಲಿ ಹರ್ಮನ್ ಬ್ಯಾಟಿಂಗ್ ನೆರವಿಗೆ ಬಂತು.
ಆದರೆ, ಬ್ರಬೊರ್ನ್ ಪಿಚ್ ಬ್ಯಾಟಿಂಗ್‌ಗೆ ನೆರವು ನೀಡುತ್ತಿದ್ದ ಕಾರಣ ಮುಂಬೈ ಗೆಲುವಿಗೆ ಕನಿಷ್ಠ 15 ರನ್‌ಗಳು ಹೆಚ್ಚಿಗೆ ಬೇಕಿದ್ದವು ಎಂಬುದು ಒಂದು ಹಂತದ ಲೆಕ್ಕಾಚಾರವಾಗಿತ್ತು. 149 ರನ್ ಸಾಧಾರಣ ಟಾರ್ಗೆಟ್ ಎಂಬತ್ತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ಸ್ ಅನಪೇಕ್ಷಿತ ಒತ್ತಡ ಹೇರಿಕೊಂಡರು. ಹಾಗಾಗಿ, 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಸೋಲೊಪ್ಪಿಕೊಂಡರು. ತಂಡದ ಪರ ಮಾರಿಜಾನ್ ಕಾಪ್ ಮತ್ತು ಯುವ ಆಟಗಾರ್ತಿ ನಿಕಿ ಪ್ರಸಾಕ್ ಅವರ ಸಾಹಸ ಫಲ ನೀಡಲಿಲ್ಲ.
ಇದಕ್ಕೂ ಮುನ್ನ ಮುಂಬೈ ಪರಿಣಾಮಕಾರಿ ಆಟಗಾರ್ತಿ ನಾಟ್ ಸಿವರ್ ಬ್ರಂಟ್ ಅವರನ್ನು ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಆಫ್ ಕಟ್ಟರ್ ಮೂಲಕ ಔಟ್ ಮಾಡಿದರು. ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಅವರನ್ನು ಶಬ್ನಿಮ್ ಇಸ್ಮಾಯಿಲ್ ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ, ಡೆಲ್ಲಿ ಆರಂಭಿಕ ಯಶಸ್ಸು ಪಡೆಯಿತು. ಆದರೆ ತಂಡದ ಖುಷಿ ಹೆಚ್ಚು ಕಾಲ ನಿಲ್ಲಲಿಲ್ಲ.
ಸಾಕಷ್ಟು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವವನ್ನೆಲ್ಲ ಮುಂಬೈ ಕ್ಯಾಪ್ಟನ್ ಹರ್ಮನ್‌ಪ್ರೀತ್ ಈ ಪಂದ್ಯದಲ್ಲಿ ಧಾರೆ ಎರೆದಂತಿತ್ತು. ಭಾರತ ತಂಡದ ನಾಯಕಿ ಅಷ್ಟೇ ಅಲ್ಲದೇ ಸ್ಛೋಟಕ ಆಟಗಾರ್ತಿಯಾಗಿಯೂ ಹೆಸರಾದವರು ಹರ್ಮನ್. WPL ಫೈನಲ್ ಪಂದ್ಯದಲ್ಲೂ ಅವರು ತಾವೇಕೆ ಚಾಂಪಿಯನ್ ಆಟಗಾರ್ತಿ ಎಂಬುದನ್ನು ಮತ್ತೆ ಪ್ರೂವ್ ಮಾಡಿದರು. ಪ್ರಶಸ್ತಿ ಗೆಲ್ಲಲೇಬೇಕೆಂದು ಪಣ ತೊಟ್ಟಂತಿದ್ದ ಅವರು ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದು ಮಾತ್ರವಲ್ಲದೇ, ತಮ್ಮ ತಂಡದಲ್ಲಿದ್ದ ಬೌಲಿಂಗ್ ಅಸ್ತ್ರಗಳನ್ನು ಅತ್ಯಂತ ಪರಿಣಾಮಕಾರಿ ಬಳಸಿದರು. ಬೌಲರ್‌ಗಳನ್ನು ರೊಟೇಟ್ ಮಾಡುತ್ತಾ ಎದುರಾಳಿ ತಂಡ ಗುರಿ ತಲುಪದಂತೆ ನೋಡಿಕೊಂಡರು.
ಮುಂಬೈಗೆ 2ನೇ ಬಾರಿ WPL ಚಾಂಪಿಯನ್ ಕಿರೀಟ: ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್ ಮುಕ್ತಾಯವಾಗಿದ್ದು, 2 ಬಾರಿ ಮುಂಬೈ ತಂಡವೇ ಪ್ರಶಸ್ತಿ ಜಯಿಸಿದೆ. ಇದರೊಂದಿಗೆ ಪುರುಷ ಮತ್ತು ಮಹಿಳಾ ವಿಭಾಗದಲ್ಲೂ ಮುಂಬೈ ಪಾರಮ್ಯ ಸಾಧಿಸುತ್ತಿದೆ.