ಮಧುರೈ (ತಮಿಳುನಾಡು): ಪತ್ನಿ ಅಶ್ಲೀಲ ಚಿತ್ರ ವೀಕ್ಷಿಸುತ್ತಾಳೆ. ಹಸ್ತಮೈಥುನಕ್ಕೆ ಒಳಗಾಗುತ್ತಾಳೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಕೋರಿದ್ದ ವ್ಯಕ್ತಿಯ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ಹೈಕೋರ್ಟ್ ವಜಾ ಮಾಡಿದೆ.
ನ್ಯಾ. ಜಿ ಆರ್ ಸ್ವಾಮಿನಾಥನ್ ಮತ್ತು ನ್ಯಾ ಆರ್ ಪೂರ್ಣಿಮಾ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದ್ದು, ಮಹಿಳಾ ಲೈಂಗಿಕ ಸ್ವಾಯುತ್ತತ್ತೆಯನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲೂ ಇದೇ ರೀತಿಯ ಪುರುಷರ ನಡುವಳಿಕೆಯನ್ನು ಸಮಾಜ ಒಪ್ಪಿದಾಗ, ಮಹಿಳೆಯರಿಗೆ ಇದು ಅಪರಾಧ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದರು.
ಏನಿದು ಪ್ರಕರಣ?: ಕರೂರು ನಿವಾಸಿ, ಪತ್ನಿಯಿಂದ ವಿಚ್ಛೇದನ ಕೋರಿ ಕರೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2018ರ ಜುಲೈನಲ್ಲಿ ಮದುವೆಯಾದ ಈ ದಂಪತಿ 2020ರ ಡಿಸೆಂಬರ್ನಿಂದ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ.
ನನ್ನ ಹೆಂಡತಿ ಲೈಂಗಿಕ ರೋಗದಿಂದ ಬಳಲುತ್ತಿದ್ದು, ಬ್ಲೂಫಿಲಂ ನೋಡುತ್ತಾಳೆ. ಮನೆಗೆಲಸ ನಿರ್ಲಕ್ಷ್ಯ ಮಾಡುತ್ತಾಳೆ. ಪೋಷಕರನ್ನೂ ಕಡೆಗಣಿಸುತ್ತಿದ್ದು , ಅತಿ ಹೆಚ್ಚಿನ ಸಮಯವನ್ನು ಫೋನ್ ವೀಕ್ಷಣೆ ಮಾಡುವುದರಲ್ಲೇ ಕಳೆಯುತ್ತಾಳೆ ಎಂದು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಗಂಡ ಹೇಳಿದಂತೆ ಹೆಂಡತಿಯ ಈ ರೋಗದ ಕುರಿತು ಯಾವುದೇ ವೈದ್ಯಕೀಯ ಪುರಾವೆಗಳನ್ನು ಹಾಗೂ ಪೂರಕ ಸಾಕ್ಷ್ಯಗಳನ್ನು ನೀಡುವಲ್ಲಿ ಅವರು ವಿಫಲವಾಗಿದ್ದಾರೆ.
ಈ ಪ್ರಕರಣ ಆಲಿಸಿದ ಪೀಠ, ಹಿಂದೂ ಮದುವೆ ಕಾಯ್ದೆ 1955ರ ಅಡಿ ಆತ್ಮತೃಪ್ತಿ ಅಪರಾಧವಲ್ಲ. ಇದನ್ನು ಕ್ರೂರತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. ಬ್ಲೂಫಿಲ್ಮಂ ನೋಡುವ ಚಟವೂ ಹಾನಿಕಾರಕವಾಗಿದೆ. ಆದರೆ, ಇದನ್ನು ಕಾನೂನಾತ್ಮಕ ವಿಷಯವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಇದನ್ನು ಅಪರಾಧ ಎನ್ನಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.