ಅಥಣಿ:- ಪೋಷಣ ಅಭಿಯಾನ ಕೇವಲ ಮಾಸಾಚರಣೆಗೆ ಸೀಮಿತವಾಗಬಾರದು,ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ವಿಶೇಷವಾಗಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಚಿಕ್ಕ ಮಕ್ಕಳಿಗೆ ಅಪೌಷ್ಟಿಕತೆ ಕೊರತೆಯಾಗದಂತೆ ಸರ್ಕಾರ ಈ ಪೋಷಣ ಅಭಿಯಾನದಂತಹ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದು, ಈ ಅಭಿಯಾನಗಳು ಕೇವಲ ಆಚರಣೆಗೆ ಸೀಮಿತವಾಗದೆ ವರ್ಷಪೂರ್ತಿ ಪೌಷ್ಟಿಕ ಆಹಾರ ಪೂರೈಕೆಯಾಗುವ ಕೆಲಸವಾಗಬೇಕು ಎಂದು ಅಥಣಿ ಪೀಠಾಸೀನದ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಈರಣ್ಣ ಈ ಎಸ್ ಹೇಳಿದರು.
ಅವರು ಗುರುವಾರ ಇಲ್ಲಿನ ತಾಲೂಕ ಪಂಚಾಯತ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕ ಆಡಳಿತ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ತಾಲೂಕಾ ಮಟ್ಟದ ಪೋಷಣ ಮಾಷಾಚರಣೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಥಣಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಮದೇವ ಸಾಲಮಂಟಪಿ ಮಾತನಾಡಿ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳನ್ನು ಅಪೌಷ್ಟಿ ಕತೆಯಿಂದ ದೂರ ಮಾಡಲು ಪೋಷಣ್ ಅಭಿಯಾನದಂತಹ ಕಾರ್ಯಕ್ರಮ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಪೌಷ್ಟಿಕ ಆಹಾರ ಸೇವನೆ ಮತ್ತು ಅದರ ಉಪಯೋಗದ ಕುರಿತು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಿಂಗಪ್ಪ ಕೋಖಲೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಪೋಷಕಾಂಶವುಳ್ಳ ತರಕಾರಿ, ಹಾಲು, ಹಣ್ಣು, ದವಸ ಧಾನ್ಯಗಳನ್ನು ಸೇವಿಸುವ ಬದಲಾಗಿ ಮಹಿಳೆಯರು ಮತ್ತು ಮಕ್ಕಳು ವಿವಿಧ ಕಂಪನಿಗಳು ತಯಾರಿಸಿದ ಸಿದ್ಧ ಆಹಾರ ಮತ್ತು ರಾಸಾಯನಿಕ ಬಳಕೆ ಮಾಡಿದ ಬೇಕರಿ ತಿಂಡಿಗಳನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪೋಷಕಾಂಶಗಳ ಆಹಾರವನ್ನು ಸೇವಿಸುವುದರಿಂದ ನಮ್ಮ ದೈಹಿಕ ಬೆಳವಣಿಗೆಗೆ ಆಗುವ ಅನುಕೂಲ ಬಗ್ಗೆ ತಿಳಿಸಬೇಕು. ಮನೆ ಮನೆಗೆ ಇಂದು ನಮ್ಮ ಆಹಾರ ಪದ್ಧತಿ ಕೂಡ ಬದಲಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀಮತಿ ಆರ್. ಬಿ. ಹೊಸಮನಿ ಅವರು ಅಭಿಯಾನದ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ,
ಅಂಗನವಾಡಿ ಚಿಣ್ಣರ ಜನ್ಮದಿನ ಆಚರಣೆ,ಮಕ್ಕಳಿಗೆ ಆಹಾರ ಪೋಷಣೆ ಕಾರ್ಯಕ್ರಮ ಸಾಂಕೇತಿಕವಾಗಿ ನೆರವೇರಿಸಲಾಯಿತು. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಅಥಣಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರವಿಕುಮಾರ್ ಕೆ, ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ಪ್ರಭಾರಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಓಂಕಾರಮೂರ್ತಿ. ಎಚ್, ಸಹಾಯಕ ಸರ್ಕಾರಿ ಅಭಿಯೋಜಕ ಬಸಪ್ಪ ಕಾಂಬಳೆ, ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜ ಡಂಗಿ, ಕಾರ್ಯದರ್ಶಿ ಎಮ್ ಆರ್ ಯಕ್ಕಂಚಿ, ಗ್ರಂಥಾಲಯ ಕಾರ್ಯದರ್ಶಿ ಆರ್ ಪಿ ನಲವಡೆ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ್ ಬಿ ಎಸ್, ಆರೋಗ್ಯ ಇಲಾಖೆಯ ಶಿಕ್ಷಣ ಅಧಿಕಾರಿ ಎಂ. ಬಿ ಗುಳಿದರ ಸೇರಿದಂತೆ ಅಭಿವೃದ್ಧಿ ಕಚೇರಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅರೋಗ್ಯ ಇಲಾಖೆ ಸಿಬ್ಬಂದಿ, ವಕೀಲರು ಇದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಬಿ ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶ್ರೀ ಕಮತೆ ನಿರೂಪಿಸಿ ವಂದಿಸಿದರು.
ವರದಿ. ರಾಜು. ವಾಘಮಾರೆ.