ಹಾವೇರಿ : ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ (Bhu guarantee) ಸಮರ್ಪಣಾ ಸಮಾವೇಶ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿರುವುದು ನಮಗೆ ಹಮ್ಮೆಯ ವಿಚಾರ ಎಂದ್ರು
ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.
“ನಾನು ಚುನಾವಣೆಗೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರುವ ಕಾರಣಕ್ಕೆ ಪಂಚ ಗ್ಯಾರಂಟಿ ನೀಡಿ, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ.
ಭೂ ದಾಖಲೆ ಇಲ್ಲದ 1,11,111 ಜನರಿಗೆ ಪೋಡಿ ಮಾಡಿ, ಖಾತಾ ಮಾಡಿ ದಾಖಲೆ ನೀಡಲಾಗಿದೆ. ಆಮೂಲಕ ನಿಮ್ಮ ಮುಂದಿನ ಪೀಳಿಗೆಗೆ ಆಸ್ತಿ ದಾಖಲೆ ಕೊಟ್ಟ ಏಕೈಕ ಸರ್ಕಾರ ಈ ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರಲಿವೆ, ಬರೆದಿಟ್ಟುಕೊಳ್ಳಿ
“ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು ಇಂಧನ ಇಲಾಖೆಯಿಂದ ವರ್ಷಕ್ಕೆ 20 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಇಂತಹ ಐಸಿಹಾಸಿಕ ಕಾರ್ಯಕ್ರಮಗಳನ್ನು ನಾವು ನೀಡುತ್ತಿದ್ದೇವೆ.
ಈ ಬಾರಿ ಚುನಾವಣೆಯಲ್ಲಿ ನಮಗೆ 136 ಸೀಟುಗಳು ಬಂದಿದ್ದವು, ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟುಗಳು ಬರಲಿವೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ ಎಂದರು.
“ಜನರು ನೆಮ್ಮದಿಯಿಂದ ಬದುಕುತ್ತಿರುವ ದಿನಗಳು, ಮಹಿಳೆಯರು ಸಂತೋಷದಿಂದ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ದಿನಗಳು, ಗೃಹಿಣಿಯರ ಬದುಕಿನಲ್ಲಿ ಬದಲಾವಣೆ ಕಂಡ ದಿನಗಳು, ಯುವಕರು ಉದ್ಯೋಗ ಸೃಷ್ಟಿಮಾಡಿಕೊಳ್ಳುತ್ತಿರುವ ದಿನಗಳನ್ನು ನಾವು ನೀವು ನೋಡುತ್ತಿದ್ದೇವೆ.
ಯಡಿಯೂರಪ್ಪನವರೇ, ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನಿಮ್ಮ ಆಡಳಿತ ಅವಧಿಯಲ್ಲಿ ಇಂತಹ ಒಂದು ಕೆಲಸವನ್ನು ನೀವು ಮಾಡಿದ್ದರೆ, ಜನರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಜನತಾ ದಳದವರು ಕೊಟ್ಟಿದ್ದರೆ, ರಾಜಕೀಯದಲ್ಲಿ ನಿಮಗೆ ಮಾತನಾಡುವ ಶಕ್ತಿ ಇರುತ್ತಿತ್ತು. ಆದರೆ ನೀವು ಅದನ್ನು ಕಳೆದುಕೊಂಡಿದ್ದೀರಿ” ಎಂದು ವಾಗ್ದಾಳಿ ನಡೆಸಿದರು.
“ಸರ್ಕಾರಕ್ಕೆ ಸಾವಿರ ದಿನಗಳು ತುಂಬಿವೆ. ಈ ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಸತ್ತರೆ ಬದುಕಿಗೆ ಅಪಮಾನ. ನಿಮ್ಮ ಋಣ ತೀರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಕೆಲಸ ನಮ್ಮದು. ನುಡಿದಂತೆ ನಡೆದು ನಿಮ್ಮ ಆಶೀರ್ವಾದ ಪಡೆಯಲು ನಾವಿಲ್ಲಿಗೆ ಬಂದಿದ್ದೇವೆ ಎಂದರು.




