ತುರುವೇಕೆರೆ : ನರೇಗಾ ಯೋಜನೆಯಡಿ ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಮಾದಿಹಳ್ಳಿ ಗ್ರಾಮ ಪಂಚಾಯಿತಿ ಅರಳೀಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ “ದುಡಿಯೋಣ ಬಾ” ಅಭಿಯಾನಕ್ಕೆ ಸಹಾಯಕ ನಿರ್ದೇಶಕ (ಗ್ರಾ.ಉ.) ಸುರೇಶ ಬಿ. ಕಾಮಗಾರಿಗೆ ಕಾರ್ಯದೇಶ ನೀಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆಯುಕ್ತಾಲಯದ ಆದೇಶದಂತೆ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಕೆಲಸ ಒದಗಿಸಲು ಮೇ 1 ರಿಂದ ಒಂದು ತಿಂಗಳ ಕಾಲ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನರೇಗಾ ಯೋಜನೆಯಡಿ ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಒಂದು ಮಾನವ ದಿನಕ್ಕೆ 370 ರೂ. ಹಣ ಕೈಗೊಂಡ ಕೆಲಸದ ಆಧಾರದ ಮೇಲೆ ನೇರವಾಗಿ ಫಲಾನುಭವಿ ಖಾತೆಗೆ ಜಮೆಯಾಗುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ನಿಂಬೆ, ಹುಣಸೆ, ಅಂಗಾಂಶ ಬಾಳೆ, ಪಪ್ಪಾಯ, ಸೀಬೆ, ನುಗ್ಗೆ, ಮಾವು, ಸಪೋಟ, ದಾಳಿಂಬೆ. ಮಲ್ಲಿಗೆ, ಕರಿಬೇವು, ವೀಳ್ಯೆದೆಲೆ, ತೆಂಗು, ಬಾರೆ, ನೇರಳೆ ಹಾಗೂ ಮಲ್ಲಿಗೆ ಬೆಳೆಗಳಿಗೆ ಸಹಾಯಧನ ಪಡೆದು ಅನುಷ್ಟಾನ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬಹುದಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಶಾಲಾಭಿವೃದ್ಧಿ ಕಾಮಗಾರಿಗಳಾದ ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ, ಅಂಗನವಾಡಿ ಕಟ್ಟಡಗಳು ಶೌಚಾಲಯ ಅನುಷ್ಟಾನಗೊಂಡಿವೆ ಎಂದ ಅವರು,
2025-26ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅನುಮೋದನೆಗೊಂಡಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಿದ್ದು, ರೈತರು ತ್ವರಿತವಾಗಿ ಕಾಮಗಾರಿಗಳನ್ನ ಆರಂಭಿಸಿ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಅನುಕೂಲ ಪಡೆದುಕೊಳ್ಳಲು ಉದ್ಯೋಗ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. 18 ವರ್ಷ ಮೇಲ್ಪಟ್ಟವರು ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ-1ನ್ನು ಭರ್ತಿ ಮಾಡಿ ಆಧಾರ್ ಕಾರ್ಡ್, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಭಾವಚಿತ್ರ ನೀಡಿ ಉದ್ಯೋಗ ಚೀಟಿ ಪಡೆಯಬೇಕು. ಒಂದು ಕುಟುಂಬಕ್ಕೆ ಒಂದು ಉದ್ಯೋಗ ಚೀಟಿಯನ್ನು ಮಾತ್ರವೇ ನೀಡಲಾಗುತ್ತದೆ. ಉದ್ಯೋಗ ಚೀಟಿ ಪಡೆದುಕೊಂಡ ಮೇಲೆ ಯೋಜನೆಯಡಿ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಪಡೆಯಬಹುದು ಅಥವಾ ತಮ್ಮ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಟಾನ ಮಾಡಿಕೊಂಡು ಕೂಲಿ ಪಡೆಯಲು ಅವಕಾಶವಿದೆ ಎಂದರಲ್ಲದೆ ನರೇಗಾ ಯೋಜನೆಯ ಅನುಕೂಲತೆಯನ್ನು ಗ್ರಾಮೀಣ ಭಾಗದ ಪ್ರತಿ ಕುಟುಂಬವು ಪಡೆದುಕೊಂಡು ಜೀವನ ಹಸನು ಮಾಡಿಕೊಳ್ಳುವಂತೆ ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್, ಬಿಲ್ ಕಲೆಕ್ಟರ್ ನರೇಂದ್ರ , ಗ್ರಾಮ ಕಾಯಕ ಮಿತ್ರ ಸೇರಿದಂತೆ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ