ಬೆಂಗಳೂರು : ರಾಜ್ಯ ಸರ್ಕಾರದ ಜನವಿರೋಧಿ ಬೆಲೆ ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಬಿಜೆಪಿ ನಾಳೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಿದ್ದು, ನಾನು ಅದರಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಉಸಿರು ಕಟ್ಟುವ ಪರಿಸ್ಥಿತಿ ಬಂದಿದೆ. ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಪ್ರಾರಂಭ ಮಾಡುತ್ತಿದ್ದೇವೆ. ನೋವು ಅನುಭವಿಸುತ್ತಿರುವ ಎಲ್ಲರೂ ಪಕ್ಷಭೇದ ಮರೆತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ಮುಸುಕಿನ ಗುದ್ದಾಟ ನಡೆದಿದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಅವರಿಗೆ ಮುಖ್ಯವೇ ಹೊರತು ಜನರು ಪ್ರಮುಖರಲ್ಲ ಎಂದು ಟೀಕಿಸಿದರು. ಬಿಜೆಪಿಯ ಹೋರಾಟ ಇನ್ನೂ ಅನೇಕ ದಿನ ನಡೆಯಲಿದೆ ಎಂದು ವಿವರಿಸಿದರು.
ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡುವ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಆಕ್ಷೇಪಿಸಿದ ಅವರು, ಉಳಿದ ಹಿಂದೂಗಳೇನು ಅಪರಾಧ ಮಾಡಿದ್ದಾರೆಯೇ? ಹಾಗೆಂದ ಮಾತ್ರಕ್ಕೆ ನಾವು ಮುಸ್ಲಿಮರ ವಿರೋಧಿಗಳಲ್ಲ. ಎಲ್ಲರನ್ನೂ ಸರಿ ಸಮಾನರಾಗಿ ನೋಡುವುದು ರಾಜ್ಯದ ಮುಖ್ಯಮಂತ್ರಿಯ ಕರ್ತವ್ಯ. ಅದನ್ನು ಮಾಡದೇ ಹಿಂದೂಗಳಿಗೆ ದ್ರೋಹ ಮಾಡಿದ್ದಾರೆ ಎಂದು ಕುಟುಕಿದರು.