Ad imageAd image

ಸಿಎಂಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ನೋಡೋಣ :ಯಡಿಯೂರಪ್ಪ 

Bharath Vaibhav
ಸಿಎಂಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ನೋಡೋಣ :ಯಡಿಯೂರಪ್ಪ 
BSY
WhatsApp Group Join Now
Telegram Group Join Now

ಬೆಂಗಳೂರು : ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೊಡೆ ತಟ್ಟಿದ್ದಾರೆ. ಇಂದು ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ನಿಮಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ನೇರ ಸವಾಲು ಹಾಕಿದ ಯಡಿಯೂರಪ್ಪ, ಚುನಾವಣೆಗೆ ಹೋದರೆ ಆಗ ನಿಮಗೆ ಗೊತ್ತಾಗಲಿದೆ, ನಮಗೆ 130 ಸ್ಥಾನ ನಿಶ್ಚಿತ. ಇದನ್ನು ನಾವು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಡಬೇಕಿದೆ ಎಂದು ತಿಳಿಸಿದರು.

ಇಂದಿರಾಗಾಂಧಿಯೂ ಸತತ ಮೂರನೇ ಬಾರಿಗೆ ಪ್ರಧಾನಿ ಆಗಲು ಆಗಿಲ್ಲ, ರಾಜೀವ್ ಗಾಂಧಿಗೆ ಸತತ ಎರಡನೇ ಬಾರಿ ಪ್ರಧಾನಿಯಾಗಲು ಆಗಲಿಲ್ಲ, ರಾಹುಲ್ ಗಾಂಧಿಗೆ ಸತತ ಮೂರನೇ ಬಾರಿ ನೂರು ಸ್ಥಾನ ಗೆಲ್ಲಲಾಗಲಿಲ್ಲ. ಆದರೆ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ ಎಂದು ತಿಳಿಸಿದರು.

ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಎನ್​ಡಿಎ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿಯೂ ಮೈತ್ರಿಗೆ 19 ಸ್ಥಾನ ಬಂದಿದೆ. ಸಿಎಂ, ಡಿಸಿಎಂ, 17 ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್​​ ಹಿನ್ನಡೆಯಾಗಿದೆ. ಕಾಂಗ್ರೆಸ್​ನ​ ಸರ್ವ ಪ್ರಯತ್ನ, ಹಣ ಬಲ, ತೋಳ್ಬಲ, ಹತ್ತು ಹಲವು ಆಮಿಷಗಳ ನಡುವೆಯೂ ಬಿಜೆಪಿಗೆ ಜನಮತ ನೀಡಿದ್ದಾರೆ. ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಲ್ಲಿ ಬಿಜೆಪಿ 130-135 ಸ್ಥಾನ ಗೆಲ್ಲಲಿದೆ ಎಂದರು.

ವಾಲ್ಮೀಕಿ ನಿಗಮ ಹಗರಣದ ಬೆನ್ನಲ್ಲೇ ಮೈಸೂರು ಮುಡಾ ಹಗರಣ ಬೆಳಕಿಗೆ ಬಂದಿದೆ. ಸಿಎಂ ಕುಟುಂಬದವರು ಇದರಲ್ಲಿ ಭಾಗಿಯಾಗಿದ್ದು, ಸಿಎಂ ಕೈವಾಡ ಇದರಲ್ಲಿದೆ. ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ, ರಾಜ್ಯದ ದುರಾಡಳಿತ ಮತ್ತು ಕೇಂದ್ರದ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಮಾಜಿ ಸಿಎಂ ಕರೆ ನೀಡಿದರು.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!