ಧಾರವಾಡ: ರೈತರು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದರೆ ಬೆಳೆಯೂ ಚೆನ್ನಾಗಿ ಬರುತ್ತದೆ ಎಂಬುದನ್ನು ಧಾರವಾಡದ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.
ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ಮೈಲಾರಪ್ಪ ಗುಡ್ಡಪ್ಪನವರ ಎಂಬ ಯುವ ರೈತ ಹಳದಿ ಕಲ್ಲಂಗಡಿ ಬೆಳೆದಿದ್ದಾರೆ. ನಾಲ್ಕರಿಂದ ಐದು ಕೆ.ಜಿ ತೂಕದ ಕಲ್ಲಂಗಡಿ ಹಣ್ಣನ್ನು ಇವರು ತಮ್ಮ ಕೈಯಲ್ಲಿ ಹಿಡಿದು ತೋರಿಸುತ್ತಿದ್ದಾರೆ.
ಆವಿಷ್ಕರಿಸಿದ ತಳಿಯ ಕಲ್ಲಂಗಡಿ ಬೀಜಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಪಡೆದು ತಮ್ಮ ಒಂದು ಎಕರೆ ಹೊಲದಲ್ಲಿ ಬೆಳೆದು, ಇದೀಗ ಹಳದಿ ಬಣ್ಣದ ಕಲ್ಲಂಗಡಿಯ ಉತ್ತಮ ಫಸಲು ಪಡೆದಿದ್ದಾರೆ. ಇದರ ಜೊತೆಗೆ ಕೆಂಪು ಕಲ್ಲಂಗಡಿಯನ್ನೂ ಬೆಳೆದಿದ್ದಾರೆ. ಒಂದೆಕರೆಗೆ ಅಂದಾಜು ಒಂದು ಲಕ್ಷ ರೂ.ಯಷ್ಟು ಖರ್ಚು ಮಾಡಿದರೆ ಸುಮಾರು ಮೂರೂವರೆ ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ಮೈಲಾರಪ್ಪ.
ಕುರುಬಗಟ್ಟಿ ಹೊರತುಪಡಿಸಿದರೆ, ಧಾರವಾಡ ತಾಲೂಕಿನ ಬಾಡ ಗ್ರಾಮದ ರೈತ ಕಲ್ಲನಗೌಡ ಪಾಟೀಲ ಎಂಬವರು ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದಾರೆ. ರೈತರ ಈ ವಿಶೇಷ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುರುಬಗಟ್ಟಿಯ ಮೈಲಾರಪ್ಪನವರ ಜಮೀನಿಗೆ ಭೇಟಿ ನೀಡಿದ ಡಿಸಿ, ಹಳದಿ ಬಣ್ಣದ ಕಲ್ಲಂಗಡಿ ನೋಡಿ ಆಶ್ಚರ್ಯಗೊಂಡರು. ಅಲ್ಲದೇ ಆ ಹಣ್ಣಿನ ರುಚಿಯನ್ನೂ ಸವಿದರು.
ಸಂದರ್ಭದಲ್ಲಿ ಮಾತನಾಡಿದ ಅವರು, “ಇಂತಹ ಹೊಸ ತಳಿಯ ಹಣ್ಣು ಬೆಳೆಯಲು ತೋಟಗಾರಿಕೆ ಇಲಾಖೆ ಸಬ್ಸಿಡಿ ನೀಡುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಲಿ” ಎಂದರು. ಕಡಿಮೆ ಖರ್ಚಿನಲ್ಲಿ ಒಂದೆಕರೆಯಲ್ಲಿ ಹಳದಿ ಕಲ್ಲಂಗಡಿ ಬೆಳೆದಿರುವ ರೈತ ಸುಮಾರು 10-15 ಟನ್ ಫಸಲು ಪಡೆದಿದ್ದಾರೆ. ಸದ್ಯಕ್ಕಂತೂ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಲಕ್ಷ ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.