ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಭಾನುವಾರ ಒಂದೇ ದಿನ 954 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು 159 ಪ್ರಕರಣ ದೃಢಪಟ್ಟಿದೆ. ಇದರಿಂದಾಗಿ ಈ ವರ್ಷ ಇಲ್ಲಿಯವರೆಗೆ 7,165 ಪ್ರಕರಣಗಳು ಪತ್ತೆಯಾದಂತಾಗಿದೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಪ್ರಸ್ತುತ 301 ಡೆಂಗ್ಯೂ ಪೀಡಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತಂಕಕಾರಿ ಸಂಗತಿ ಎಂದರೆ ಸಣ್ಣ ಮಕ್ಕಳಲ್ಲಿ ಮತ್ತು 18 ವರ್ಷ ಒಳಗಿನವರಲ್ಲಿಯೂ ಈ ಸೋಂಕು ಕಂಡುಬಂದಿದೆ.
ಡೆಂಗ್ಯೂವಿನಿಂದಾಗಿ ಈವರೆಗೆ ರಾಜ್ಯದಲ್ಲಿ 6 ಮಂದಿ ಮೃತಪಟ್ಟಿದ್ದು, ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಈಡಿಸ್ ಸೊಳ್ಳೆಗಳ ನಿಯಂತ್ರಣ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.