——————ಭಾರತ- ಪಾಕ್ ಕದನ ವಿರಾಮ ಸಂಬಂಧ
—————-ಯುವ ಕಾಂಗ್ರೆಸ್ ನಿಂದ ಪೋಸ್ಟರ ಅಭಿಯಾನ
ಬೆಂಗಳೂರು: ಕದನ ವಿರಾಮ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ ನಡೆಸಿದೆ. “ಭಾರತಕ್ಕೆ ಮಾತಿನ ಮೋದಿ ಸಾಕು. ಇಂದಿರಾ ಗಾಂಧಿಯ ನಡೆ ಬೇಕು” ಎಂದು ರಾಜ್ಯ ಯುವ ಕಾಂಗ್ರೆಸ್ ಪೋಸ್ಟರ್ ಹಾಕಿದೆ.
ಸಿಎಂ ನಿವಾಸ, ಮೌರ್ಯ ಸರ್ಕಲ್, ಕಾಂಗ್ರೆಸ್ ಭವನ, ಆನಂದ್ ರಾವ್ ಸರ್ಕಲ್, ಕೆನರಾ ಬ್ಯಾಂಕ್ ವಾಲ್, ಟೌನ್ ಹಾಲ್, ಶೇಷಾದ್ರಿಪುರಂ ಸೇರಿ ಹಲವೆಡೆ ಪೋಸ್ಟರ್ ಅಂಟಿಸಿ, ಭಾರತಕ್ಕೆ ಮಾತಿನ ಮೋದಿ ಸಾಕು. ಇಂದಿರಾ ಗಾಂಧಿಯ ನಡೆ ಬೇಕೆಂದು ಯೂತ್ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಇದೇ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ನಮ್ಮಿಂದ ಕದನ ವಿರಾಮ ಅಂತ ಟ್ರಂಪ್ ಹೇಳುತ್ತಾರೆ. ಕದನ ವಿರಾಮದ ಷರತ್ತುಗಳ ಬಗ್ಗೆ ಹೇಳಿಲ್ಲ. ಎಲ್ಲಾ ಪ್ರಧಾನಿಗಳು ಕೆಲಸ ಮಾಡಿದ್ದಾರೆ. ಆದರೆ ಯಾರು ಹೇಳಿಕೊಳ್ಳುತ್ತಿರಲಿಲ್ಲ ಅಷ್ಟೇ. ಯಾಕೆಂದರೆ ಅವರ ಉದ್ದೇಶ ಬೇರೆ ಇರುತ್ತಿತ್ತು. ಇವರು ಹಿಂಗೆ ಮಾಡಿದ್ದೇನೆ ಅಂತ ಹೇಳಿಕೊಳ್ತಾರೆ. ರಾಜಕೀಯ ಲಾಭ ಬೇಕು ಅಂತ ಹೇಳುತ್ತಾರೆ. ಪಾಕಿಸ್ತಾನವನ್ನು ಸೋಲಿಸಿದರು ಅಂತ ನೆನಪು. ಇಂದಿರಾಗಾಂಧಿ ಅವರನ್ನು ನೆನಪು ಮಾಡಿಕೊಳ್ತಾರೆ. ಇಂತಹ ವಿಚಾರದಲ್ಲಿ ಇಂದಿರಾ ಬಗ್ಗಿರಲಿಲ್ಲ. ಟ್ರಂಪ್ ಹೇಳಿದ ತಕ್ಷಣ ನಮ್ಮ ಪಿಎಂ ಬಾಯಿ ಬಿಡುತ್ತಿಲ್ಲ. ನಾನು ಒತ್ತಡ ಹಾಕಿ ಯುದ್ಧ ನಿಲ್ಲಿಸಿದ್ದೇನೆ ಅಂತ ಟ್ರಂಪ್ ಹೇಳುತ್ತಿದ್ದಾರೆ. ಅದರ ಬಗ್ಗೆ ಯಾಕೆ ಮೋದಿ ನಿನ್ನೆ ಮಾತನಾಡಿಲ್ಲ” ಎಂದು ಕಿಡಿಕಾರಿದರು.
“ಏನು ಮಾತಾಡಬೇಕು ಅದನ್ನು ಮಾತಾಡಿಲ್ಲ. ಜನರ ಅನುಮಾನ ನಿವಾರಣೆ ಮಾಡಲಿಲ್ಲ. ಜನರನ್ನು ಎಷ್ಟು ಅಂತ ದಾರಿ ತಪ್ಪಿಸುತ್ತೀರಾ?. ಪ್ರಧಾನಿ ಮೋದಿ ವೀರಾವೇಶದ ಭಾಷಣ ಮಾಡಿದ್ದರು. ಉಗ್ರರನ್ನು ಮಣ್ಣುಪಾಲು ಮಾಡದೆ ಬಿಡಲ್ಲ ಅಂದಿದ್ದರು. ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ದೊಡ್ಡ ತೀರ್ಮಾನ ಮಾಡಬಹುದು ಅಂತ ಜನರ ನಿರೀಕ್ಷೆ ಇತ್ತು. ನಿನ್ನೆ ಪ್ರಧಾನಿ ಭಾಷಣ ಮಾಡಿದ್ದರು. ಪಾಕಿಸ್ತಾನ ದಾಳಿ ನಿಲ್ಲಿಸುವಂತೆ ಅಂಗಲಾಚಿದ್ರು ಅಂದರು. ಆದರೆ, ಏನು ನಡೆದಿದೆ ಅಂತ ಯಾರಿಗೂ ಗೊತ್ತಿಲ್ಲ. ಕೇವಲ ಮನ್ ಕಿ ಬಾತ್ ಮಾತ್ರ ಮಾಡುತ್ತಾರೆ. ಪಾರ್ಲಿಮೆಂಟ್ಗೆ ಬರುತ್ತಾರೆ, ಹೋಗುತ್ತಾರೆ. ಕೇವಲ ರಾಜಕೀಯ ಮಾತ್ರ ಮಾತಾಡುತ್ತಾರೆ. ಪಾಕಿಸ್ತಾನ ನಮ್ಮ ಮೇಲೂ ದಾಳಿ ಮಾಡಿದೆ. ನಮ್ಮ ದೇಶ ಪಾಕಿಸ್ತಾನದ ಮೇಲೆ ದಾಳಿ ಮಾಡಿದೆ. ಇದರಿಂದ ಎಷ್ಟು ಯಶಸ್ಸು ಸಿಕ್ಕಿದೆಯೋ ಗೊತ್ತಿಲ್ಲ. ಕದನ ವಿರಾಮಕ್ಕೆ ಏನು ಷರತ್ತು ಇತ್ತು. ಯಾವ ಆಧಾರದ ಮೇಲೆ ಒಪ್ಪಿಕೊಂಡರು” ಎಂದು ಪ್ರಶ್ನಿಸಿದರು.
ಇಂದಿರಾ ಗಾಂಧಿ ಉಕ್ಕಿನ ಮಹಿಳೆ: ಇದೇ ವೇಳೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, “ಇಂದಿರಾಗಾಂಧಿ ಉಕ್ಕಿನ ಮಹಿಳೆ. ಅವರನ್ನು ನೆನಸಿಕೊಳ್ಳುವುದು ಸರಿಯಾಗಿದೆ. ಪಾಕಿಸ್ತಾನದ ಮೇಲೆ ಯುದ್ದ ಘೋಷಣೆಯಾದಾಗ ಇಂದಿರಾ ಎಲ್ಲಾ ಒತ್ತಡ ಎದುರಿಸಿದ್ದರು. ಬಾಂಗ್ಲಾ ನರಮೇಧವನ್ನು ಇಂದಿರಾ ತಡೆದರು. ಅವರು ತೋರಿಸಿದ 1% ಧೈರ್ಯವನ್ನು ಮೋದಿ ತೋರಿಸಿಲ್ಲ. ವಿದೇಶಾಂಗ ನೀತಿಗಳು ಐಸೋಲೇಟ್ ಮಾಡಿವೆ. ಭಾರತ ಏಕಾಂಗಿಯಾಗಿ ನಿಲ್ಲುವಂತೆ ಆಗಿದೆ. ಇದಕ್ಕೆ ಕಾರಣ ಮೋದಿಯವರ ನೀತಿಗಳು. ಅಮೆರಿಕದ ಅಧ್ಯಕ್ಷ ಡಿಕ್ಟೇಟ್ ಮಾಡುವುದು ಬೇಕಿರಲಿಲ್ಲ. ಮೋದಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಭಾಷಣ ಮಾಡಿದ್ದಾರೆ” ಎಂದು ಟೀಕಿಸಿದರು.
“ಪಹಲ್ಗಾಮ್ ನಂತರ ಹಲವು ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡುತ್ತಿಲ್ಲ. ಸರ್ವಪಕ್ಷ ಸಭೆಗೆ ಮೋದಿ ಗೈರಾಗುತ್ತಾರೆ. ಉಗ್ರರ ತಾಣದ ಮೇಲೆ ದಾಳಿಯಾಗುತ್ತದೆ. ಆಗ ಮೋದಿ ಎಲ್ಲಿದ್ದರೋ ಗೊತ್ತಿಲ್ಲ. ಕದನ ವಿರಾಮ ನಾನೇ ಮಾಡಿದ್ದು ಅಂತ ಟ್ರಂಪ್ ಹೇಳುತ್ತಾರೆ. ಇದರ ಬಗ್ಗೆ ಮೋದಿ ಮಾತನಾಡಿಲ್ಲ. ಈ ಮೊದಲು ಭಾರತ ಯಾರ ಮುಂದೆಯೂ ತಲೆ ತಗ್ಗಿಸಿರಲಿಲ್ಲ. ಆದರೆ ಈಗ ತಲೆತಗ್ಗಿಸಿದಂತಾಗಿದೆ. ಭಾರತದ ಸಾರ್ವಭೌಮತೆಗೆ ಧಕ್ಕೆ ಆಗಿದೆ. ಟ್ರಂಪ್ ಬೆದರಿಕೆ ಹಾಕಿದ ರೀತಿ ಇತ್ತು. ಎಲ್ಲ ವ್ಯಾಪಾರ ಸ್ಥಗಿತ ಅಂತ ಬೆದರಿಸಿದಂತಿತ್ತು. ಅಸಲಿ ಯಾರು, ನಕಲಿ ಯಾರು ಎಂಬುದು ಗೊತ್ತಾಗಬೇಕಿದೆ. ದೇಶದ ಗೌರವದ ಪ್ರಶ್ನೆ ಇದು” ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.