ತುರುವೇಕೆರೆ: ತಾಲ್ಲೂಕಿನ ನೆಹರು ವಿದ್ಯಾಶಾಲಾ ಬಾಲಿಕಾ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಪ್ರಸ್ತುತ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದರು.
ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಯೋಗ ಪದ್ದತಿ ರೂಢಿಯಲ್ಲಿತ್ತು ಎನ್ನಲಾಗಿದೆ. ಯೋಗ ಇಂದು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿದೆ. ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ದೃಷ್ಟಿಯಿಂದ ಪ್ರತಿವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ಪ್ರಸ್ತಾಪಿಸಿದ್ದಲ್ಲದೆ ಯೋಗದ ಪ್ರಾಚೀನ ಪರಂಪರೆ ಮತ್ತು ಜಾಗತಿಕ ಆರೋಗ್ಯ, ಸಾಮಾಜಿಕ ಶಾಂತಿ ಉತ್ತೇಜಿಸುವ ಸಾಮರ್ಥ್ಯ ಯೋಗದಲ್ಲಿದೆ ಎಂಬುದನ್ನು ಒತ್ತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ 2014 ರ ಡಿಸೆಂಬರ್ 11 ರಂದು ವಿಶ್ವಸಂಸ್ಥೆಯು ಪ್ರತಿ ವರ್ಷದ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಈ ಘೋಷಣೆಗೆ ವಿಶ್ವದ 177 ರಾಷ್ಟ್ರಗಳು ಬೆಂಬಲಿಸಿವೆ ಎಂದರು.
ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಿಗ್ಗೆ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ಅಧ್ಯಯನದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಷಯದಲ್ಲಿ ಹೆಚ್ಚಿನ ಜ್ಞಾನ ಹೊಂದಲು ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಏಕಾಗ್ರತೆ, ಮಾನಸಿಕ ಹಾಗೂ ಬೌದ್ದಿಕ ಬೆಳವಣಿಗೆಗೆ ಯೋಗಾಭ್ಯಾಸ ಮಾಡುವುದು ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸಿ.ಬಿ.ಚಂದ್ರಯ್ಯ, ದೈಹಿಕ ಶಿಕ್ಷಕಿ ಗೀತಾ, ಶಿಕ್ಷಕರಾದ ಶ್ರೀಧರ್, ಚಂದ್ರಶೇಖರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




