ಸೇಡಂ: ಶರಣಪ್ರಕಾಶ ಪಾಟೀಲ್ ನಿಮ್ಮ ಕ್ಷೇತ್ರದ ಆಸ್ತಿ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸೇರಿದ ಆಸ್ತಿ’ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹೇಳಿದರು.

ಸೋಮವಾರ ಸೇಡಂ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿಶೀಲ ನಾಯಕ ಶರಣಪ್ರಕಾಶ ಪಾಟೀಲರನ್ನು ಪಡೆದಿರುವ ನೀವು ಭಾಗ್ಯವಂತರು. ಅವರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ₹75 ಕೋಟಿ ವೆಚ್ಚದ ತರಬೇತಿ ಸಂಸ್ಥೆಯನ್ನು ಈ ಭಾಗಕ್ಕೆ ತಂದಿದ್ದಾರೆ. ಇಲ್ಲಿ ತರಬೇತಿ ಪಡೆದ ಎಲ್ಲರಿಗೂ ಉದ್ಯೋಗ ಒದಗಿಸುವ ಕೆಲಸ ನಡೆಯುತ್ತಿದೆ. ಇದರಿಂದ ಇಡೀ ರಾಜ್ಯದ ಯುವಕರಿಗೆ ಹೊಸ ದಾರಿ ತೆರೆದುಕೊಂಡಿದೆ’ ಎಂದು ಹೇಳಿದರು.
‘ಶರಣಪ್ರಕಾಶ ಪಾಟೀಲರು ನಮ್ಮ ಮುಂದೆ ಹಲವು ಅಭಿವೃದ್ಧಿ ಬೇಡಿಕೆಗಳನ್ನು ಇಟ್ಟಿದ್ದಾರೆ. ಏತ ನೀರಾವರಿ ಮುಖಾಂತರ ₹300 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಜೊತೆಗೆ ಸೇಡಂ ಹಾಗೂ ಚಿಂಚೋಳಿ ತಾಲೂಕಿನ ಕಾಗಿಣಾ ನದಿಗೆ ₹505 ಕೋಟಿ ವೆಚ್ಚದ ಏತನೀರಾವರಿ ಯೋಜನೆಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲ ಯೋಜನೆಗಳಿಗೆ ಡಿಪಿಆರ್ ತಯಾರಿಸಲಾಗುವುದು. ರೈತರ ಬದುಕು ಹಸನಾಗಿಸಲು ಅವರು ನಿರಂತರ ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

‘ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಹೋರಾಟ ಮಾಡಿ 371(ಜೆ) ಕಲಂ ತಂದದ್ದು ಐತಿಹಾಸಿಕ ಸಾಧನೆ. ಕಲಬುರಗಿ ಆಸ್ಪತ್ರೆ, ವಿಮಾನ ನಿಲ್ದಾಣ ಹಾಗೂ ಕಾಲೇಜುಗಳು ಅವರ ಆಡಳಿತಾವಧಿಯ ಕೊಡುಗೆ. ಈ ಮೂಲಕ ನಮ್ಮ ಸರ್ಕಾರ ಅಭಿವೃದ್ಧಿ ಪರವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಶರಣಪ್ರಕಾಶ ಪಾಟೀಲ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಕಲಬುರಗಿ ಜಿಲ್ಲಾಧಿಕಾರಿ ಸೇರಿದಂತೆ ಜಗದೇವ ಗುತ್ತೆದಾರ್ ಕಾಳಗಿ, ಮಹಾಂತಪ್ಪ ಸಂಗಾವಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




