ಬಳ್ಳಾರಿ: ಗಣಿನಾಡಿನಲ್ಲಿ ಬಿಸಿಲ ಝಳಕ್ಕೆ ಹೈರಾಣಾಗಿರುವ ಜನರು ತಮ್ಮ ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಮನೆಯಲ್ಲೇ ಇರೋಣ ಎಂದರೆ ಫ್ಯಾನ್‌ನ ಬಿಸಿಗಾಳಿ ಕೂರಲು ಬಿಡುತ್ತಿಲ್ಲ. ಬೆಂಕಿ ಬಿಸಿಲಿನಿಂದ ಕೆಲ ಸಮಯವಾದರೂ ಎಸ್ಕೇಪ್ ಆಗಲು ಜನತೆ ಸ್ವಿಮ್ಮಿಂಗ್ ಪೂಲ್‌ಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ಈಜುಕೊಳಗಳಲ್ಲೀಗ ಜನವೋ ಜನ.
ಬಳ್ಳಾರಿ ನಗರದ ಜಿಲ್ಲಾ ಮೈದಾನದಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಯ ಈಜುಕೊಳಕ್ಕೀಗ ಎಲ್ಲಿಲ್ಲದ ಡಿಮ್ಯಾಂಡ್. ಬೇರೆ ದಿನಗಳಲ್ಲಿ ಬೆರಳೆಣಿಕೆಯಷ್ಟು ಜನರು ಬರುತ್ತಿದ್ದ ಈಜುಕೊಳಕ್ಕೀಗ ಬೆಳಗ್ಗೆಯಿಂದ ರಾತ್ರಿಯವರಿಗೂ ಪುರುಸೊತ್ತಿಲ್ಲ. ಈಜುಕೊಳಕ್ಕೆ ಬರುವವರನ್ನು ಬ್ಯಾಚ್‌ಗಳಲ್ಲಿ ವಿಂಗಡಿಸಿ ಪ್ರವೇಶ ನೀಡಲಾಗುತ್ತಿದೆ.
ಬಳ್ಳಾರಿಯಲ್ಲಿ ಈಗಾಗಲೇ 43 ಉಷ್ಣಾಂಶ ದಾಖಲಾಗಿದ್ದು, ದಿನೇ ದಿನೇ ತಾಪ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ಪ್ರಖರತೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ, ಪೋಷಕರು ಮಕ್ಕಳನ್ನು ಸ್ವಿಮ್ಮಿಂಗ್ ಪೂಲ್‌ಗೆ ಕರೆತರುತ್ತಿದ್ದಾರೆ. ಒಂದೆರೆಡು ಗಂಟೆಗಳ ಕಾಲ ನೀರಲ್ಲಿ ಕಾಲ ಕಳೆಯುತ್ತಾ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಬಾಲಕ ದರ್ಶನ್ ಮಾತನಾಡಿ, “ಬಳ್ಳಾರಿಯಲ್ಲಿ ಬಿಸಿಲು ಜಾಸ್ತಿ ಇದೆ. ಮನೆಯಲ್ಲಿ ಫ್ಯಾನ್ ಗಾಳಿ ಸಾಕಾಗುತ್ತಿಲ್ಲ. ಹಾಗಾಗಿ ಸ್ವಿಮ್ಮಿಂಗ್ ಪೂಲ್‌ಗೆ 100 ರೂಪಾಯಿ ಕೊಟ್ಟು ಆಡಲು ಬಂದಿದ್ದೇವೆ. ಇಲ್ಲಿ ತಂಪಾಗುತ್ತಿದ್ದು, ಚೆನ್ನಾಗಿದೆ. ನಾನು ನನ್ನ ಸ್ನೇಹಿತರ ಜೊತೆ ಬಂದಿದ್ದೇನೆ” ಎಂದರು.
ಈಜುಕೊಳಕ್ಕೆ ಬಂದಿರುವ ಪ್ರವಾಸಿಗರೊಬ್ಬರು ಪ್ರತಿಕ್ರಿಯಿಸಿ, “ಬಹಳ ಬಿಸಿಲು ಇರುವುದರಿಂದ ನಾವು ಇಲ್ಲಿನ ಹೋಟೆಲ್ನ ಸ್ವಿಮ್ಮಿಂಗ್ ಪೂಲ್‌ಗೆ ಬಂದಿದ್ದೇವೆ. ಒಮ್ಮೆಗೆ ಈಜುಕೊಳಕ್ಕೆ 100 ಜನರನ್ನು ತೆಗೆದುಕೊಳ್ಳುತ್ತಾರೆ. ಸಣ್ಣಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಕೊಳ ಉತ್ತಮವಾಗಿದೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬಹಳಷ್ಟು ಜನ ಬರುತ್ತಿದ್ದಾರೆ. ಬೆಳಗ್ಗಿನಿಂದ 3 ಬ್ಯಾಚ್, ಸಾಯಂಕಾಲ ಒಂದು ಬ್ಯಾಚ್ನಂತೆ ಕೊಳಕ್ಕೆ ಬಿಡುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಕೊಳದ ವ್ಯವಸ್ಥೆ ಇದೆ” ಎಂದು ತಿಳಿಸಿದರು.
ಸ್ವಿಮ್ಮಿಂಗ್ ಪೂಲ್ ಉಸ್ತುವಾರಿ ಭಾಸ್ಕರ್ ರೆಡ್ಡಿ ಮಾತನಾಡಿ, “ಈ ಸಲ ಬಳ್ಳಾರಿಯಲ್ಲಿ ಬಿಸಿಲು ವಿಪರೀತ. ಬಳ್ಳಾರಿಯಲ್ಲಿ ಈಜುಕೊಳ ಕಡಿಮೆ ಇರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ” ಎಂದರು.