ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ) : ಬೇಸಿಗೆ ಪ್ರಾರಂಭದಲ್ಲೇ ಹಲವೆಡೆ ಕುಡಿವ ನೀರಿನ ಸಮಸ್ಯೆ ಉದ್ಭವಿಸಿದ್ದು ಜನರು ಪರದಾಡುತ್ತಿದ್ದಾರೆ. ಗೋದಾವರಿ ಜಲಾನಯನ ಪ್ರದೇಶವಾದ ಛತ್ರಪತಿ ಸಂಭಾಜಿನಗರ ಜಿಲ್ಲೆ, ಪೈಥಾನ್ ತಾಲೂಕಿನ ತಾಂಡ್ಯ ಎಂಬ ಗ್ರಾಮದಲ್ಲಿ ನೀರಿನ ಸಮಸ್ಯೆ ಅತಿರೇಕಕ್ಕೆ ತಲುಪಿದೆ.
ನೀರು ಇಲ್ಲದ ಈ ಊರಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ! ಕಾರಣ ಗ್ರಾಮದ ಮಹಿಳೆಯರು ಮೈಲಿಗಳಷ್ಟು ದೂರ ಕ್ರಮಿಸಿ ನೀರು ತರಬೇಕಾದ ಪರಿಸ್ಥಿತಿ ಇಲ್ಲಿದ್ದು, ಇದನ್ನು ಕಂಡು ಹೆಣ್ಣು ಹೆತ್ತವರು ಈ ಊರಿಗೆ ತಮ್ಮ ಮಕ್ಕಳನ್ನು ಕೊಡಲು ಹಿಂದೇಟು ಹಾಕುವಂತಾಗಿದೆ.
ತಮ್ಮ ಮಕ್ಕಳು ಮದುವೆಯಾಗಿ ಈ ಗ್ರಾಮಕ್ಕೆ ತೆರಳಿದರೆ ಜೀವನಪೂರ್ತಿ ನೀರು ಹೊರಬೇಕಾಗುತ್ತದೆ. ಅದೂ ನಿತ್ಯ. ಆ ಕಷ್ಟ ನಮ್ಮ ಹೆಣ್ಣು ಮಕ್ಕಳಿಗೆ ಬರಬಾರದು. ಜೀವನಪರ್ಯಂತ ನೀರಿಗಾಗಿ ಹೋರಾಟ ಮಾಡುವುದು ನಮಗೆ ಇಷ್ಟವಿಲ್ಲ. ಬರಿ ನೀರಿಗಾಗಿ ಮೈಲಿಗಟ್ಟಲೇ ನಡೆಯುವುದನ್ನು ನಾವು ಬಯಸುವುದಿಲ್ಲ ಎನ್ನುತ್ತಾರೆ ನೆರೆಹೊರೆ ಗ್ರಾಮಸ್ಥರು. ಸಮಸ್ಯೆ ಮನಗೊಂಡ ತಾಂಡ್ಯ ಗ್ರಾಮದ ಅವಿವಾಹಿತ ಯುವಕರು, ಬೇರೆ ಸ್ಥಳಗಳಿಗೆ ವಲಸೆ ಹೋಗುವ ಮೂಲಕ ಅಲ್ಲಿ ತಮ್ಮ ತಮ್ಮ ಸಂಗಾತಿಗಳನ್ನು ಹುಡುಕಿಕೊಂಡು ಬರುವಂತಾಗಿದೆ. ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ, ಕಳೆದ ಹಲವು ದಿನಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದ್ದಾರೆ.
ಇಲ್ಲಿ ಪ್ರತಿವರ್ಷವೂ ಇದೇ ಗೋಳು, ಅದೇ ಹಾಡು: ಸುಮಾರು 3,000 ಜನಸಂಖ್ಯೆಯನ್ನು ಹೊಂದಿರುವ ತಾಂಡ್ಯ ಗ್ರಾಮ, ವರ್ಷಪೂರ್ತಿ ನೀರಿನ ಬಿಕ್ಕಟ್ಟಿನ ವಿರುದ್ಧ ಹೋರಡಬೇಕಾಗಿದೆ. ಇದೀಗ ಬೇಸಿಗೆ ಬಂದಿದ್ದರಿಂದ ನೀರಿನ ಸಮಸ್ಯೆ ಅತಿರೇಕಕ್ಕೆ ತಲುಪಿದೆ. ಹನಿ ನೀರಿಗೂ ಹಾಹಾಕಾರ, ತತ್ವಾರ ಉಂಟಾಗಿದೆ. ಸುಡುವ ಬಿಸಿಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು ನೀರಿಗಾಗಿ ಕಿಲೋ ಮೀಟರ್ ಗಟ್ಟಲೇ ಕ್ರಮಿಸಬೇಕು. ವಿಪರ್ಯಾಸ ಎಂದರೆ ಈ ಗ್ರಾಮವು ಏಷ್ಯಾದ ಅತಿದೊಡ್ಡ ಅಣೆಕಟ್ಟಿನಲ್ಲಿ ಒಂದಾದ ಜಯಕ್ವಾಡಿ ಅಣೆಕಟ್ಟಿನಿಂದ ಕೇವಲ 25ರಿಂದ 30 ಕಿಲೋಮೀಟರ್ ದೂರದಲ್ಲಿದೆ!.
ಟ್ಯಾಂಕರ್ ಪೂರೈಕೆ ಇದ್ದರೂ ಯಾವುದಕ್ಕೂ ಸಾಲುತ್ತಿಲ್ಲ: ನೀರಿನ ಟ್ಯಾಂಕರ್ ಮೂಲಕ 10 ರಿಂದ 12 ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದರೂ ಗ್ರಾಮದಲ್ಲಿ ಅಳವಡಿಸಲಾದ ನಲ್ಲಿಗಳು ಬತ್ತಿ ಹೋಗುತ್ತಿವೆ. ಟ್ಯಾಂಕರ್ ಪೂರೈಕೆ ಇದ್ದರೂ, ನೀರು ಸಾಕಾಗುತ್ತಿಲ್ಲ. ನೀರನ್ನು ಮೊದಲು ಬಾವಿಗೆ ಬಿಡಲಾಗುತ್ತದೆ. ಆದರೆ, ಅಡುಗೆ ಮತ್ತು ಕುಡಿಯಲು ಬಳಸಿದ ನಂತರ, ಮೂಲಭೂತ ಬಳಕೆಗಳಿಗೆ ನೀರೇ ಉಳಿಯುವುದಿಲ್ಲ. ಶಾಲೆ ಮುಗಿದ ಬಳಿಕ ಅನೇಕರು ತಮ್ಮ ಮಕ್ಕಳನ್ನು ನೀರು ತರಲು ಒತ್ತಾಯಿಸುವುಂಟು. ಗ್ರಾಮದಲ್ಲಿ ನೀರಿನ ಮಟ್ಟ ತುಂಬಾ ಕಡಿಮೆಯಾಗಿದೆ. ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆಯ್ಕೆ ಆದವರಿಗೆ ಇದೇ ಬಂಡವಾಳ: ಗ್ರಾಮಕ್ಕೆ ಅನುಮೋದಿತ ನೀರಿನ ಯೋಜನೆ ಅಪೂರ್ಣವಾಗಿಯೇ ಉಳಿದಿದೆ. ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ನೀರಿನ ಸಮಸ್ಯೆಯನ್ನು ಈವರೆಗೂ ಜೀವಂತಾಗಿಟ್ಟಿದ್ದಾರೆ. ಎಷ್ಟೋ ಬಾರಿ ಮನವಿ ಮಾಡಲಾಗಿದೆ. ಆದರೂ, ಗ್ರಾಮಕ್ಕೆ ಕಾಡುತ್ತಿರುವ ನೀರಿನ ಸಮಸ್ಯೆ ಸರಿದೂಗಿಲ್ಲ. ಹಾಗಾಗಿ ನಾವು ಸ್ಥಳಾಂತರಗೊಳ್ಳುವ ಆಲೋಚನೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಅವಿನಾಶ್ ಜಾಧವ್ ಹತಾಶೆ ವ್ಯಕ್ತಪಡಿಸಿದರು.