ತುರುವೇಕೆರೆ: ಸ್ಥಳೀಯ ಪಟ್ಟಣ ಪಂಚಾಯ್ತಿಯ 2025-26 ನೇ ಸಾಲಿನ ಆಯವ್ಯಯ ಸಭೆ ಇಂದು ಪಪಂ ಅಧ್ಯಕ್ಷೆ ಸ್ವಪ್ನ ನಟೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಆಯವ್ಯಯ ಮಂಡಿಸಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್ 2025-26 ನೇ ಸಾಲಿಗೆ 30 ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಿದರು.
2024-25 ನೇ ಸಾಲಿನ ಪ್ರಾರಂಭಿಕ ಶಿಲ್ಕು 24,90,585 ರೂ, 2025-26 ನೇ ಸಾಲಿಗೆ ನಿರೀಕ್ಷಿಸಲಾದ ಒಟ್ಟು ಆದಾಯ 12 ಕೋಟಿ 49 ಲಕ್ಷದ 25 ಸಾವಿರ ರೂ ಒಟ್ಟು 12 ಕೋಟಿ 74 ಲಕ್ಷದ 15 ಸಾವಿರದ 585 ರೂಗಳಲ್ಲಿ 2025-26 ನೇ ಸಾಲಿಗೆ ನಿರೀಕ್ಷಿಸಲಾದ ಪಾವತಿ 12 ಕೋಟಿ 44 ಲಕ್ಷದ 25 ಸಾವಿರ ಕಳೆದರೆ ಪಟ್ಟಣ ಪಂಚಾಯ್ತಿಯು 2025-26 ನೇ ಸಾಲಿಗೆ 29 ಲಕ್ಷದ 90 ಸಾವಿರ 585 ರೂಗಳ ಉಳಿತಾಯದಲ್ಲಿದೆ ಎಂದರು.
2025-26 ನೇ ಸಾಲಿಗೆ ನಿರೀಕ್ಷಿಸಲಾಗಿರುವ ಆದಾಯದ ಪ್ರಕಾರ ಆಸ್ತಿ ತೆರಿಗೆ 1 ಕೋಟಿ 15 ಲಕ್ಷ, ನೀರಿನ ತೆರಿಗೆ 36 ಲಕ್ಷ, ಅಂಗಡಿ ಬಾಡಿಗೆ 12 ಲಕ್ಷದ 50 ಸಾವಿರ, ಉದ್ದಿಮೆ ಪರವಾನಗಿ ಶುಲ್ಕ 10 ಲಕ್ಷ, ಸಾಮಾನ್ಯ ತೆರಿಗೆ ಆದಾಯ 43 ಲಕ್ಷದ 70 ಸಾವಿರ, ರಾಜ್ಯ ಹಣಕಾಸು ಆಯೋಗದ ವೇತನ ಅನುದಾನ 1 ಕೋಟಿ 45 ಲಕ್ಷ, ವಿದ್ಯುತ್ ಅನುದಾನ 1 ಕೋಟಿ 20 ಲಕ್ಷ, ಮುಕ್ತ ನಿಧಿ ಅನುದಾನ 25 ಲಕ್ಷ ಒಟ್ಟು ರಾಜಸ್ವ ಸ್ವೀಕೃತಿ 5 ಕೋಟಿ 7 ಲಕ್ಷದ 20 ಸಾವಿರ ರೂಗಳು. ಬಂಡವಾಳ ಸ್ವೀಕೃತಿಯಲ್ಲಿ 15 ನೇ ಹಣಕಾಸು ಯೋಜನೆ ಅನುದಾನ 1 ಕೋಟಿ, ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ 1 ಕೋಟಿ 20 ಲಕ್ಷ, ಸಿಎಂ ನಗರೋತ್ಥಾನ ಯೋಜನೆ ಅನುದಾನ 3 ಕೋಟಿ, ಕುಡಿಯುವ ನೀರು ಯೋಜನೆ ಅನುದಾನ 5 ಲಕ್ಷ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ ಅನುದಾನ 1 ಕೋಟಿ ಒಟ್ಟು ಬಂಡವಾಳ ಸ್ವೀಕೃತಿಯಲ್ಲಿ 6 ಕೋಟಿ 25 ಲಕ್ಷ, ಅಸಾಮಾನ್ಯ ಸ್ವೀಕೃತಿಯಲ್ಲಿ ಶೇ.24.10, ಶೇ. 7.25, ಶೇ. 5, ಶೇ.1 ರ ಕಾರ್ಯಕ್ರಮಕ್ಕೆ 23 ಲಕ್ಷದ 5 ಸಾವಿರ, ಆಸ್ತಿ ತೆರಿಗೆ ಮೇಲಿನ ಉಪಕರಣಗಳ ವಸೂಲಾತಿ 25 ಲಕ್ಷ, ಗುತ್ತಿಗೆದಾರರ ಕಾಮಗಾರಿ ಬಿಲ್ಗಳಿಂದ ಜಮಾ 21 ಲಕ್ಷ, ನೌಕರರ ವೇತನದಲ್ಲಿ ಜಮಾ 30 ಲಕ್ಷ, ಗೃಹಭಾಗ್ಯ ಯೋಜನೆ ಅನುದಾನ 10 ಲಕ್ಷ, ಎನ್.ಸಿ.ಎಫ್ ವಂತಿಕೆ ಸರ್ಕಾರದ ಅನುದಾನ 3 ಲಕ್ಷ, ಜನಗಣತಿ ಸೇವಾ ಕಾರ್ಯಕ್ಕೆ ಅನುದಾನ 5 ಲಕ್ಷ ಒಟ್ಟು 1 ಕೋಟಿ 17 ಲಕ್ಷದ 5 ಸಾವಿರ ರೂ ಅಸಾಮಾನ್ಯ ಸ್ವೀಕೃತಿಯಲ್ಲಿ ಬರುವ ಆದಾಯವಾಗಿದೆ. ಒಟ್ಟಾರೆ ಪಟ್ಟಣ ಪಂಚಾಯ್ತಿಗೆ 2025-26 ನೇ ಸಾಲಿಗೆ ನಿರೀಕ್ಷಿಸಲಾದ ಒಟ್ಟು ಆದಾಯ 12 ಕೋಟಿ 49 ಲಕ್ಷದ 25 ಸಾವಿರ ರೂ ಆದಾಯ ನಿರೀಕ್ಷಿಸಲಾಗಿದೆ ಎಂದರು.
ಬಜೆಟ್ ಮಂಡನೆಯಾದ ನಂತರ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಪೈಕಿ ಪಟ್ಟಣದ ಹಲವು ಕಡೆ ಪಟ್ಟಣ ಪಂಚಾಯ್ತಿ ಸ್ವತ್ತನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಗೊತ್ತಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ತೋರಿರುವ ಬಗ್ಗೆ ಸದಸ್ಯರಾದ ಎನ್.ಆರ್.ಸುರೇಶ್, ಅಂಜನ್ ಕುಮಾರ್, ಆರ್.ಮಧು, ಯಜಮಾನ್ ಮಹೇಶ್, ಚಿದಾನಂದ್ ಕಿಡಿಕಾರಿದರು.
ಪಟ್ಟಣದ ನಾಗರೀಕರು ಬ್ಯಾಂಕಿಗೆ ಕಂದಾಯ ಪಾವತಿಸಿ ರಸೀದಿಯನ್ನು ಪಟ್ಟಣ ಪಂಚಾಯ್ತಿಗೆ ತಲುಪಿಸಿದ್ದರೂ ಅದನ್ನು ರೆಕಾರ್ಡ್ ಪುಸ್ತಕದಲ್ಲಿ ದಾಖಲೆ ಮಾಡದೆ ರಸೀದಿ ಕಳೆದು ನಾಗರೀಕರನ್ನು ಕಂದಾಯ ಕಟ್ಟಿಲ್ಲ, ಮತ್ತೆ ಕಟ್ಟಿ ಎನ್ನುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಪಪಂ ಸದಸ್ಯ ಪ್ರಭಾಕರ್ ಸ್ವತಃ ನನ್ನನ್ನೇ ರಸೀದಿ ಕಳೆದುಹೋಗಿದೆ ಪರವಾಗಿಲ್ಲ, ಇನ್ನೊಮ್ಮೆ ಕಂದಾಯ ಪಾವತಿಸಿ ಎಂದು ಹೇಳಿ ಸದಸ್ಯರಿಗೆ ಹೀಗಾದರೆ ಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗುತ್ತಿದ್ದು, ನಾಗರೀಕರು ಪಟ್ಟಣ ಪಂಚಾಯ್ತಿ ಸದಸ್ಯರಾದ ನಮಗೆ ಬೈಯುತ್ತಿದ್ದಾರೆ, ಬೀದಿಬದಿ ವ್ಯಾಪಾರಸ್ಥರು ರಸ್ತೆ ಬದಿ ಬಿಟ್ಟು ರಸ್ತೆಯಲ್ಲೇ ವ್ಯಾಪಾರ ಪ್ರಾರಂಭಿಸಿದ್ದಾರೆ. ಇದರಿಂದ ನಾಗರೀಕರಿಗೆ ಬಹಳ ತೊಂದರೆಯಾಗುತ್ತಿದೆ. ನ್ಯಾಯಾಲಯ ಆದೇಶವಿದೆ. ಕೂಡಲೇ ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ಮಳಿಗೆಯ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಸದಸ್ಯರೆಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದರು.
ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಎನ್.ಆರ್.ಸುರೇಶ್, ಅಂಜನ್ ಕುಮಾರ್, ಆರ್.ಮಧು, ಯಜಮಾನ್ ಮಹೇಶ್, ಚಿದಾನಂದ್, ಪ್ರಭಾಕರ್, ರವಿ, ನದೀಮ್ ಅಹಮದ್, ಶೀಲಾ, ಆಶಾ, ಮೇಘನಾ, ಜಯಮ್ಮ, ನಾಮಿನಿ ಸದಸ್ಯರಾದ ರುದ್ರೇಶ್, ಶ್ರೀನಿವಾಸಮೂರ್ತಿ, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಕಂದಾಯ ನಿರೀಕ್ಷಕ ಪ್ರಶಾಂತ್, ಲೆಕ್ಕಾಧಿಕಾರಿ ಸದಾನಂದ್, ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




