ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗೆ ಪೊಲೀಸರು ‘ಶಿಷ್ಟಾಚಾರ ಈವ್ ಟೀಸಿಂಗ್ ವಿರೋಧಿ ಸ್ವಾಡ್’ ರಚಿಸಿದ್ದಾರೆ. ಈ ತಂಡ ಎಲ್ಲೆಡೆ ಗಸ್ತು ತಿರುಗಿ ಮಹಿಳೆಯರ ಭದ್ರತೆಯನ್ನು ಖಾತ್ರಿಪಡಿಸಲಿದೆ.
ವೈಯಕ್ತಿಕ ಅಥವಾ ಸಾಂಸ್ಕೃತಿಕ ನೈತಿಕಗಿರಿ ಹೇರುವ ಬದಲಾಗಿ ಕಟ್ಟುನಿಟ್ಟಾಗಿ ಕಾನೂನು ಕ್ರಮಗಳನ್ನು ಈ ತಂಡ ಜಾರಿಗೊಳಿಸುತ್ತಿದೆ. ಈವ್ ಟೀಸಿಂಗ್, ಕಿರುಕುಳ ಮತ್ತಿತರ ಮಹಿಳೆಯರ ಮೇಲಿನ ಅಪರಾಧವನ್ನು ತಡೆಯುತ್ತದೆ.
ಮಾರ್ಚ್ 8ರ ಮಹಿಳಾ ದಿನದಂದು ನಗರ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಇಂಥದ್ದೊಂದು ಕ್ರಮವನ್ನು ಜಾರಿಗೊಳಿಸಿದ್ದಾರೆ. ಆಯುಕ್ತರ ಆದೇಶದ ಪ್ರಕಾರ, ತಂಡಗಳಲ್ಲಿ ತರಬೇತಿ ಹೊಂದಿದ ಸದಸ್ಯರು ಇದ್ದು, ಅಪರಾಧಗಳನ್ನು ತಡೆಗಟ್ಟುವುದು ಹಾಗೂ ನೈಜ ಸಮಯದಲ್ಲಿ ಅಂತಹ ಪರಿಸ್ಥಿತಿಗಳಿಗೆ ತಕ್ಷಣವೇ ಪ್ರತಿಕ್ರಿಯಿಸಲಿದ್ದಾರೆ.
ದೆಹಲಿಯ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಎರಡು ಈವ್ ಟೀಸಿಂಗ್ ವಿರೋಧಿ ತಂಡ ನೇಮಿಸಲಾಗುವುದು. ಇವರನ್ನು ಜಿಲ್ಲಾ ಮಹಿಳಾ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಮೇಲ್ವಿಚಾರಣೆ ಮಾಡಲಿದ್ದಾರೆ.
ಪ್ರತಿ ತಂಡದಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಒಬ್ಬ ಸಬ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್ ಶ್ರೇಣಿಯ ನಾಲ್ವರು ಮಹಿಳಾ ಮತ್ತು ಐವರು ಪುರುಷ ಅಧಿಕಾರಿಗಳು ಇರುತ್ತಾರೆ. ಹೆಚ್ಚುವರಿಯಾಗಿ ವಿಶೇಷ ಸಿಬ್ಬಂದಿ ಅಥವಾ ಎಎಟಿಎಸ್ ಸಹಾಯವನ್ನೂ ಒದಗಿಸಲಾಗುತ್ತದೆ.
ಮಹಿಳೆಯರ ಮೇಲಿನ ಅಪರಾಧಗಳಿಗೆ ‘ಹಾಟ್‌ಸ್ಪಾಟ್’ಗಳೆಂದು ಗುರುತಿಸಲಾದ ಪ್ರದೇಶದಲ್ಲಿ ಮೊದಲು ಈ ತಂಡ ಗಮನಹರಿಸುತ್ತದೆ. ಇಂತಹ ಸ್ಥಳಗಳ ಪಟ್ಟಿಯನ್ನು ಸಂಗ್ರಹಿಸುವ ಡಿಸಿಪಿ, ಕನಿಷ್ಠ ಎರಡು ಸೂಕ್ಷ್ಮ ಪ್ರದೇಶದಲ್ಲಿ ತಮ್ಮ ಸಿಬ್ಬಂದಿ ಪ್ರತಿನಿತ್ಯ ಗಸ್ತು ತಿರುಗಲು ಸೂಚಿಸುತ್ತಾರೆ.
ಗಸ್ತು ನಡೆಸುವ ತಂಡ ಸಾಮಾನ್ಯ ಉಡುಪಿನಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ಸಾರಿಗೆ ಹಾಗೂ ದೆಹಲಿ ಸಾರಿಗೆ ನಿಗಮದ ಚಾಲಕರು ಮತ್ತು ಪ್ರಯಾಣಿಕರೊಂದಿಗೆ ಸಮನ್ವಯ ಸಾಧಿಸಿ, ಕಿರುಕುಳದಂತಹ ಘಟನೆಗಳನ್ನು ವರದಿ ಮಾಡುತ್ತದೆ. ಸಂತ್ರಸ್ತರು ಯಾವುದೇ ಮುಜುಗರಕ್ಕೆ ಒಳಗಾಗದಂತೆ ಇವರು ನೋಡಿಕೊಳ್ಳಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ಕ್ರಮದ ಮೂಲಕ ದೆಹಲಿ ಪೊಲೀಸರು ರಾಜಧಾನಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಗುರಿ ಹೊಂದಿದ್ದಾರೆ.