46 ನೇ ವಯಸ್ಸಿಗೆ ತಂದೆಯಾದ ಮಾಜಿ ಕ್ರಿಕೆಟಿಗ
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ 46ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಜಹೀರ್ ಪತ್ನಿ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ತಮಗೆ ಗಂಡು ಮಗು ಜನಿಸಿದೆ ಎಂದು ಜಹೀರ್ ದಂಪತಿ ಮಗುವಿನೊಂದಿಗಿನ ಫೋಟೊವನ್ನು ಹಂಚಿಕೊಂಡು ಖುಷಿ ವ್ಯಕ್ತಪಡಿಸಿದೆ. ಫ್ಯಾನ್ಸ್ ಸೇರಿ ಗಣ್ಯರು ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಪ್ರೇಮ ವಿವಾಹ: ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ ಪ್ರೇಮ ವಿವಾಹವಾಗಿದ್ದಾರೆ. ಕೆಲವು ದಿನಗಳ ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ ನವೆಂಬರ್ 23, 2017ರಂದು ವಿವಾಹವಾಗಿತ್ತು. ಸದ್ಯ ಜಹೀರ್ ದಂಪತಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಇದೀಗ ಎಂಟು ವರ್ಷಗಳ ನಂತರ, ದಂಪತಿಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿಗಿಟ್ಟ ಹೆಸರೇನು: ಜಹೀರ್ ಖಾನ್ ಮತ್ತು ಸಾಗರಿಕಾ ಘಾಟ್ಗೆ ದಂಪತಿಗೆ ಜನಿಸಿರುವ ಗಂಡು ಮಗುವಿಗೆ ಫತೇಸಿನ್ಹ್ ಖಾನ್ ಎಂದು ನಾಮಕರಣ ಮಾಡಲಾಗಿದೆ.
ಸದ್ಯ ಜಹೀರ್ ಖಾನ್ ಅವರು ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಲಕ್ನೋ ಆಡಿರುವ ಏಳು ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, ಮೂರರಲ್ಲಿ ಸೋಲು ಕಂಡಿದೆ. 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಜಹೀರ್ ಖಾನ್ ಕ್ರಿಕೆಟ್ ದಾಖಲೆ: ಜಹೀರ್ ಖಾನ್ 2000 ರಿಂದ 2014 ರವರೆಗೆ 14 ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 92 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1231 ರನ್ ಗಳಿಸಿ 311 ವಿಕೆಟ್‌ಗಳನ್ನು ಪಡೆದಿದ್ದಾರೆ. 200 ಏಕದಿನ ಪಂದ್ಯಗಳನ್ನು ಆಡಿರುವ ಇವರು 792 ರನ್ ಗಳಿಸಿ 282 ವಿಕೆಟ್ ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 11 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು. 87 ರನ್ಗಳಿಗೆ 7 ವಿಕೆಟ್ ಪಡೆದಿದ್ದು, ಇವರ ಅತ್ಯುತ್ತಮ ಬೌಲಿಂಗ್ ದಾಖಲೆ ಆಗಿದೆ.
ಐಪಿಎಲ್ ದಾಖಲೆ: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಜಹೀರ್ ಖಾನ್ ಒಟ್ಟು 100 ಪಂದ್ಯಗಳನ್ನು ಆಡಿ 102 ವಿಕೆಟ್‌ಗಳನ್ನು ಕಬಳಿಸಿದ್ದಾರೆ.