ಯರಗಟ್ಟಿ (ಬೆಳಗಾವಿ): ಬ್ರಿಟಿಷರು ಇಡೀ ದೇಶವನ್ನು ಕೊಳ್ಳೆ ಹೊಡೆದು ಹೋಗಿದ್ದ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಎಂದರೆ ಬದ್ದತೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬಡಜನರ ಹಸಿವನ್ನ ನೀಗಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಯರಗಟ್ಟಿಯಲ್ಲಿರುವ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ನಡೆದ ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಂಬರುವ ಲೋಕಸಭಾ ಚುನಾವಣೆ ಜಿಲ್ಲೆಯ ಪಾಲಿಗೆ ಪ್ರತಿಷ್ಠೆಯಾಗಿದೆ. ಬೆಳಗಾವಿ ಜಿಲ್ಲೆಯ ಜನ ಸ್ವಾಭಿಮಾನಿಗಳು, ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿರುವ ಜಿಲ್ಲೆಯನ್ನು ಬೇರೆ ಜಿಲ್ಲೆಯವರು ಪ್ರತಿನಿಧಿಸುವುದು ಬೇಡ ಎಂದು ಹೇಳಿದರು.
ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೊಟ್ಟ ಮಾತಿನಂತೆ ನುಡಿದಂತೆ ನಡೆದಿದೆ, ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಸಾರ್ಥಕತೆಯಿಂದ ಕೆಲಸ ಮಾಡುತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು, ಭಾರತ ಹುಟ್ಟಿ ಕೇವಲ 10 ವರ್ಷ ಆಯ್ತು ಅನ್ನೋ ಭ್ರಮೆ ಬಿಜೆಪಿಯವರದ್ದು ಎಂದು ಹೇಳಿದರು.
ಬ್ರಿಟಿಷರು ಭಾರತ ಬಿಟ್ಟು ಹೋದಾಗ ಸೂಜಿಯನ್ನು ತಯಾರು ಮಾಡೋಕೆ ಆಗುತ್ತಿರಲಿಲ್ಲ. ಬಡತನದ ಜೊತೆಗೆ ಅನಾರೋಗ್ಯ, ಪ್ಲೇಗ್, ಕಾಲರಾದಂಥ ರೋಗಗಳಿದ್ವು, ಇಂಥ ಪರಿಸ್ಥಿತಿಯಲ್ಲಿ ದೇಶ ಕಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ ಎಂದು ಸಚಿವರು ಹೇಳಿದರು.
ಬೆಳಗಾವಿಗೆ ಶೆಟ್ಟರ್ ಅವರ ಕೊಡುಗೆ ಶೂನ್ಯ.ಐಐಟಿ ಕಾಲೇಜು, ಹೈಕೋರ್ಟ್, ಐಟಿ ಬಿಟಿ ಕಂಪನಿಗಳು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಇವತ್ತು ಬೆಳಗಾವಿ ಕರ್ಮಭೂಮಿ ಎಂದು ಹೇಳುವ ಮೂಲಕ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಮನೆ ಮಗ ಬೇಕಾ, ಹೊರಗಿನವರು ಬೇಕಾ ಎಂದು ಪ್ರಶ್ನಿಸಿದರು.
ನಮಗೆ ಬಾಡಿಗೆ ಮನೆ ಬೇಡ, ಸ್ವತಃ ಮನೆ ಬೇಕು. ಬೀಗರು ಮನೆಗೆ ಬಂದು ಊಟ ಮಾಡಿಹೋಗ್ತಾರೆ ಅಂದ್ರೆ, ಇಲ್ಲೆ ಯಜಮಾನ ಆಗಲು ಬಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿಯಿಂದ ಪ್ರತಿ ಚುನಾವಣೆಗೂ ಹೊಸ ಕಥೆಯ ಭಾಷಣ: ಸಚಿವ ಸತೀಶ್ ಜಾರಕಿಹೊಳಿ ಟೀಕೆ
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಒಂದು ಭಾಷಣ ಮಾಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ಗುಡುಗಿದರು. ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿ, ಸವದತ್ತಿ ಕ್ಷೇತ್ರದಲ್ಲಿ ಅತಿಹೆಚ್ಚು ಲೀಡ್ ಕೊಡಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು ಸತೀಶ್ ಜಾರಕಿಹೊಳಿ ಮನವಿ ಮಾಡಿದರು.
ಇದೇ ವೇಳೆ ಪ್ರಾಸ್ತಾವಿಕ ಭಾಷಣ ಮಾಡಿದ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಯಲ್ಲಮ್ಮ ದೇವಿಯ ದೇವಸ್ಥಾನ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಿಗುವುದು ಗ್ಯಾರಂಟಿ ಎಂದು ಹೇಳಿದರು.
ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಮಾತನಾಡಿ, ಕ್ಷೇತ್ರದಾದ್ಯಂತ ಕಾಂಗ್ರೆಸ್ ವಾತಾವರಣವಿದ್ದು, ಗೆಲ್ಲಲು ಉತ್ತಮ ವಾತಾವರಣವಿದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸಬೇಕು ಎಂದರು. ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಮಾತನಾಡಿದರು.
ಎಲ್ಲೆಲ್ಲೂ ಜನಸಾಗರ
ಯರಗಟ್ಟಿಯಲ್ಲಿ ಭಾನುವಾರ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ-2 ಕಾರ್ಯಕ್ರಮಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಜನರು ಹಾಜರಿದ್ದರು. ಸುಮಾರು ಒಂದೂವರೆ ಗಂಟೆ ತಡವಾಗಿ ಕಾರ್ಯಕ್ರಮ ಆರಂಭಗೊಂಡರೂ ಸಮಾಧಾನಚಿತ್ತದಿಂದ ಕುಳಿತಿದ್ದ ಜನರು, ನೆಚ್ಚಿನ ನಾಯಕ ಸಿದ್ದರಾಮಯ್ಯ ನವರನ್ನು ನೋಡುತ್ತಿದ್ದಂತೆ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಹಾಜರಿದ್ದರು. ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿ ಜನರತ್ತ ಕೈ ಬೀಸಿದರು. ಸುಮಾರು 25 ನಿಮಿಷಗಳ ಕಾಲ ಮಾತನಾಡಿದರು. ಸಿಎಂ ಭಾಷಣದುದ್ದಕ್ಕೂ ಹೌದು.. ಹುಲಿಯಾ..ಎಂದು ಜನರು ಉದ್ಗರಿಸಿದರು.
ವರದಿ ಪ್ರತೀಕ ಚಿಟಗಿ