ಚಿಕ್ಕೋಡಿ:ಪಟ್ಟಣದ ಹೊರವಲಯದಲ್ಲಿಯ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮುಖ್ಯ ರಸ್ತೆಯಿಂದ ಆಸ್ಪತ್ರೆಯವರೆಗೆ ₹ 51.75 ಲಕ್ಷ ಅನುದಾನದಲ್ಲಿ 1.5 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಸೋಮವಾರ ಭೂಮಿಪೂಜೆಯನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಾಯೀತು.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಕಾಶ ಹುಕ್ಕೇರಿ, ” ಕಳೆದ ಹಲವು ವರ್ಷಗಳ ಹಿಂದೆ ತಾಲ್ಲೂಕಿನ ಜನರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ₹ 28 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 100 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು.
ಕೆಲವೇ ದಿನಗಳಲ್ಲಿ ಈ ಆಸ್ಪತ್ರೆಯನ್ನು ಎಲ್ಲ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮದಾಗಿದೆ” ಎಂದರು.”ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಹಾಗೂ ಸಿಜರಿನ್ ಸೇವೆಯನ್ನು ಒದಗಿಸುವ ಏರ್ಪಾಡನ್ನು ವೈದ್ಯರೊಂದಿಗೆ ಚರ್ಚಿಸಿ ಮಾಡಲಾಗಿದೆ.
ಅಲ್ಲದೇ, ಶೀಘ್ರದಲ್ಲಿಯೇ ಸದಲಗಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲಾಗುವುದು. ಕೋಥಳಿ ಗ್ರಾಮದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಕುಮಾರ ಬಾಗಾಯಿ, ತಾಲ್ಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಹೇಶ ನಾಗರಬೆಟ್ಟ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ, ಡಾ. ವಿಜಯಲಕ್ಷ್ಮೀ ಮುಸಾಳೆ, ರಾಜಶೇಖರ ಮಿರ್ಜೆ, ಚಿಕ್ಕೋಡಿ ಪುರಸಭೆ ಉಪಾಧ್ಯಕ್ಷ ಇರ್ಫಾನ್ ಬೇಪಾರಿ, ಸದಸ್ಯರಾದ ರಾಮಾ ಮಾನೆ, ಗುಲಾಬಹುಸೇನ ಬಾಗವಾನ, ಸಾಬೀರ ಜಮಾದಾರ, ವರ್ಧಮಾನ ಸದಲಗೆ, ಅಭಿಯಂತರ ಬಿ ಡಿ ನಾಯಕವಾಡಿ ಮುಂತಾದವರು ಇದ್ದರು.
ವರದಿ: ರಾಜು ಮುಂಡೆ