ಅಹಮದಾಬಾದ್: 18 ವರ್ಷಗಳ ಕಾಯುವಿಕೆ, ಕೋಟ್ಯಾಂತರ ಅಭಿಮಾನಿಗಳ ಹರಕೆ.. ಅದೆಷ್ಟೋ ಕನಸು ಕಣ್ಣುಗಳ ಆಸೆ.. ಕೊನೆಗೂ ನನಸಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ವನವಾಸದ ಬಳಿಕ ಐಪಿಎಲ್ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು 9 ವಿಕೆಟ್ ಕಳೆದುಕೊಂಡು 190 ರನ್ ಮಾಡಿದರೆ, ಪಂಜಾಬ್ ತಂಡವು 184 ರನ್ ಮಾಡಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬೆಂಗಳೂರು ತಂಡದ ಹೆಚ್ಚಿನ ಬ್ಯಾಟರ್ ಗಳು ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.
ಅನುಭವಿ ವಿರಾಟ್ ಕೊಹ್ಲಿ ಅವರದ್ದೇ ಗರಿಷ್ಠ ಗಳಿಕೆ. ವಿರಾಟ್ 35 ಎಸೆತಗಳಲ್ಲಿ 43 ರನ್ ಮಾಡಿದರು. ಉಳಿದಂತೆ ರಜತ್ ಪಾಟಿದಾರ್ 26 ರನ್, ಮಯಾಂಕ್ ಅಗರ್ವಾಲ್ 24, ಲಿವಿಂಗ್ ಸ್ಟೋನ್ 25, ಜಿತೇಶ್ ಶರ್ಮಾ 24, ಶೆಫರ್ಡ್ 17 ರನ್ ಮಾಡಿದರು.
ಪಂಜಾಬ್ ಪರ ಅರ್ಶದೀಪ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಕಿತ್ತರು. ಅದರಲ್ಲೂ ಅರ್ಶದೀಪ್ ಅವರ ಮೂರು ವಿಕೆಟ್ ಕೊನೆಯ ಓವರ್ ನಲ್ಲಿ ಬಂದಿದ್ದು ವಿಶೇಷ. ಉಳಿದಂತೆ ಅಜ್ಮತುಲ್ಲಾ, ವೈಶಾಖ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
191 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರ್ಯ 24 ರನ್ ಮಾಡಿದರೆ, ಪ್ರಭ್ ಸಿಮ್ರಾನ್ 26 ರನ್ ಮಾಡಿದರು. ಕಳೆದ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ ಕೇವಲ ಒಂದು ರನ್ ಗೆ ಆಟ ಮುಗಿಸಿದರು.
ಉತ್ತಮ ಬ್ಯಾಟಿಂಗ್ ಮಾಡಿದ ಜೋಶ್ ಇಂಗ್ಲಿಶ್ 39 ರನ್ ಮಾಡಿದರು. 23 ಎಸೆತ ಎದುರಿಸಿದ ಅವರು ನಾಲ್ಕು ಸಿಕ್ಸರ್ ಬಾರಿಸಿದರು.
ನೆಹಾಲ್ ವಧೇರ 18 ಎಸೆತಗಳಲ್ಲಿ 15 ರನ್ ಮಾಡಿ ಔಟಾದರು. ಸ್ಪೋಟಕ ಬ್ಯಾಟರ್ ಸ್ಟೋಯಿನಸ್ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದರಾದರೂ ಎರಡನೇ ಎಸೆತಕ್ಕೆ ಔಟಾದರು. ಭುವನೇಶ್ವರ್ ಕುಮಾರ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತು ಪಂದ್ಯದ ಗತಿ ಬದಲಿಸಿದರು.