ಮೈಸೂರು/ಚಾಮರಾಜನಗರ: ಸಿಎಂ ಸಿದ್ದರಾಮಯ್ಯನವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಟೈಮ್ನಲ್ಲೂ ಒಂದೇ ರೀತಿ ಬಿಗಿಯಾಗಿ ರಾಜಕಾರಣ ಮಾಡಲು ಕಾಂಪ್ರಮೈಸ್ ಅನಿವಾರ್ಯ ಎಂದರು.
ಬೆಂಬಲಿಗರನ್ನು ಕಾಪಾಡುವ ವಿಚಾರದಲ್ಲಿ ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಹಾಗೆ ಅನ್ನಿಸುವುದಿಲ್ಲ, ರಾಜಕೀಯದಲ್ಲಿ ಕೆಲವೊಮ್ಮೆ ವೀಕ್ ಆಗಿರಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ಸ್ಟ್ರಾಂಗ್ ಕೂಡ ಆಗಬೇಕಾಗುತ್ತದೆ. ಎಲ್ಲವೂ ಸಮಯ-ಸಂದರ್ಭಕ್ಕೆ ತಕ್ಕಂತೆ ಇರಬೇಕು ಎಂದರು.
ಜಬ್ಬಾರ್ ಅಮಾನತು ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಬಹಳಷ್ಟು ಜನ ಸಸ್ಪೆಂಡ್ ಆದವರು ಮತ್ತೆ ವಾಪಸ್ ಬಂದಿದ್ದಾರೆ. ಜಬ್ಬಾರ್ ಕೂಡ ವಾಪಸ್ ಬರುತ್ತಾರೆ ಎಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಜಬ್ಬಾರ್ ಅಮಾನತು ತೆರುವಾಗುವ ಸುಳಿವು ನೀಡಿದರು.




