ಮೇದಕ್ : ಮದ್ಯದ ವ್ಯಸನ ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಇಳಿಸುತ್ತದೆ ಎಂಬುದಕ್ಕೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕುಡಿಯಲು ಹಣವಿಲ್ಲದ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಒಂದು ವಾರದ ಗಂಡು ಮಗುವನ್ನು ಪ್ರಿಯಕರನೊಂದಿಗೆ ಸೇರಿ ಮಾರಾಟ ಮಾಡಿದ ಘೋರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಹವೇಲಿ ಘನಪುರ ಮಂಡಲದ ಲಿಂಗಸಾನಿಪಲ್ಲಿ ತಾಂಡಾದ ಮಂಜುಳಾ ಎಂಬಾಕೆ, ಮಹಿಪಾಲ್ ಎಂಬ ವ್ಯಕ್ತಿಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದಳು. ಫೆಬ್ರವರಿ 10 ರಂದು ಮಂಜುಳಾ ಮೆದಕ್ನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.
1.70 ಲಕ್ಷಕ್ಕೆ ಮಗು ಮಾರಾಟ:
ಮದ್ಯಕ್ಕೆ ತೀವ್ರವಾಗಿ ದಾಸಿಯಾಗಿದ್ದ ಮಂಜುಳಾ ಮತ್ತು ಆಕೆಯ ಪ್ರಿಯಕರ ಮಹಿಪಾಲ್ ಹತ್ತಿರ ಕುಡಿಯಲು ಹಣವಿರಲಿಲ್ಲ. ಈ ಕಾರಣಕ್ಕಾಗಿ ತನ್ನ ವಾರದ ಮಗುವನ್ನೇ ಮಾರಲು ಸಂಚು ರೂಪಿಸಿದ ಮಂಜುಳಾ, ಕಾಮಾರೆಡ್ಡಿ ಜಿಲ್ಲೆಯ ದಂಪತಿಗೆ 1.70 ಲಕ್ಷ ರೂಪಾಯಿಗಳಿಗೆ ಮಗುವನ್ನು ಮಾರಾಟ ಮಾಡಿದ್ದಾಳೆ.
ಬೆಳಕಿಗೆ ಬಂದಿದ್ದು ಹೇಗೆ?
ಬಾಣಂತಿಯರಿಗೆ ಸರ್ಕಾರದಿಂದ ನೀಡಲಾಗುವ ಮೊಟ್ಟೆ ಮತ್ತು ಪೌಷ್ಟಿಕ ಆಹಾರವನ್ನು ಪಡೆಯಲು ಮಂಜುಳಾ ಬಾರದೇ ಇದ್ದಾಗ, ಅನುಮಾನಗೊಂಡ ಅಂಗನವಾಡಿ ಕಾರ್ಯಕರ್ತೆ ಆಕೆಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಮಗು ಇಲ್ಲದಿರುವುದನ್ನು ಕಂಡು ಕೂಡಲೇ ಐಸಿಡಿಎಸ್ (ICDS) ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.




