ಚೇಳೂರು : ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾರ್ವೆಲ್ ಟೆಕ್ನಾಲಜಿ ಮತ್ತು ಯುನೈಟೆಡ್ ವೇ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ಕೊಡುಗೆಯಾಗಿ ನೀಡಲಾದ ಸುಸಜ್ಜಿತ ಆಂಬುಲೆನ್ಸ್ ಸೇವೆಗೆ ಬುಧವಾರ ಚಾಲನೆ ನೀಡಲಾಯಿತು.
ತಾಲೂಕು ಇಓ ರಮೇಶ್, ಟಿಎಚ್ಒ ಸತ್ಯನಾರಾಯಣ ರೆಡ್ಡಿ ಹಾಗೂ ಪಿಡಿಒ ಗೌಸ್ ಪೀರ್ ಅವರು ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ಈ ಸೇವೆಗೆ ಚಾಲನೆ ನೀಡಿದರು.
ಇದೇ ವೇಳೆ, ಆರೋಗ್ಯ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಪ್ರತಿನಿಧಿಗಳನ್ನು ಟಿಎಚ್ಒ ಸತ್ಯನಾರಾಯಣ ರೆಡ್ಡಿ, ಇಓ ರಮೇಶ್ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಸತ್ಯನಾರಾಯಣ ರೆಡ್ಡಿ,ಚೇಳೂರು ಭಾಗದ ಜನರಿಗೆ ತುರ್ತು ಚಿಕಿತ್ಸೆಗಾಗಿ ಬಾಗೇಪಲ್ಲಿ ಅಥವಾ ಚಿಂತಾಮಣಿಗೆ ಹೋಗಲು ದೂರವಾಗುತ್ತಿತ್ತು. ಸಕಾಲದಲ್ಲಿ ಚಿಕಿತ್ಸೆ ದೊರೆಯಲು ವಾಹನ ಸೌಕರ್ಯದ ಅಗತ್ಯವಿತ್ತು. ಶಾಸಕರ ಸೂಚನೆ ಮೇರೆಗೆ ಈ ಆಂಬುಲೆನ್ಸ್ ನೀಡಲಾಗಿದ್ದು, ಇದು ಸಾರ್ವಜನಿಕರಿಗೆ ಬಹಳ ಸಹಕಾರಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸ್ಥೆಯ ಪ್ರತಿನಿಧಿ ಭಾರತಿ ಮಾತನಾಡಿ,ಸಂಸ್ಥೆಯ ವತಿಯಿಂದ ಈಗಾಗಲೇ ಬಾಗೇಪಲ್ಲಿ ಭಾಗದಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕಗಳು, 500 ಸೌರಶಕ್ತಿ ಬೀದಿ ದೀಪಗಳು ಹಾಗೂ 10 ಅಂಗನವಾಡಿ-ಶಾಲೆಗಳ ನವೀಕರಣ ಕಾರ್ಯಗಳನ್ನು ಮಾಡಲಾಗಿದೆ. ಇದೀಗ 2 ಆಂಬುಲೆನ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ 20 ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ನೀಡಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಿಡಿಒ ಗೌಸ್ ಪೀರ್, ವೈದ್ಯಾಧಿಕಾರಿ ಸುಜಿತ್ ರೆಡ್ಡಿ, ಭಾಸ್ಕರ್, ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸೇರಿದಂತೆ,ಗ್ರಾಮಸ್ಥರು ಹಾಗೂ ಇತರರು ಹಾಜರಿದ್ದರು.
ವರದಿ :ಯಾರಬ್. ಎಂ.




