ಯಮಕನಮರಡಿ: ತನ್ನ ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮರ್ಯಾದೆ ಕಳೆದಳು ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಯೊಬ್ಬಳನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಎಂಬಾಕೆಯೇ ಕೊಲೆಯಾದ ದುರ್ದೈವಿ. ಸತ್ಯವ್ವಳಿಗೆ ಈ ಹಿಂದೆ ಮದುವೆಯಾಗಿತ್ತು.
ಆದರೆ, ಆಕೆ ತನ್ನ ಪತಿಯನ್ನು ಬಿಟ್ಟು ತಾನು ಪ್ರೀತಿಸುತ್ತಿದ್ದ ಕೃಷ್ಣಾ ಪಾಟೀಲ (28) ಎಂಬಾತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಈ ಹಿಂದೆ ನಾಪತ್ತೆ ದೂರು ಕೂಡ ದಾಖಲಾಗಿತ್ತು.
ಕೃತ್ಯ ನಡೆದ ಹಿನ್ನೆಲೆ:
ಮನೆ ಬಿಟ್ಟು ಹೋಗಿದ್ದ ಸತ್ಯವ್ವಳನ್ನು ಆಕೆಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ. ಮಾರ್ಚ್ 13 ರಂದು ಆಕೆಯನ್ನು ಕೊಲೆ ಮಾಡಿದ ಕುಟುಂಬಸ್ಥರು, ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕಾಶ ಹಳವರ (ಯುವತಿಯ ಚಿಕ್ಕಪ್ಪ), ಶಾನೂರ ಹಳವರ (ಯುವತಿಯ ಸಹೋದರ), ಮೊರಬದ ಕಲ್ಲಪ್ಪ (ಯುವತಿಯ ಸಹೋದರಿಯ ಪತಿ)
ಪೊಲೀಸ್ ತನಿಖೆ:
ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ಈ ಕೃತ್ಯವು ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.




