Ad imageAd image

ಕಾಂಗ್ರೆಸ್ ಪಕ್ಷದಿಂದ ಅತೀ ಹೆಚ್ಚು ಯುವಕರಿಗೆ ಮಣೆ: ಸಚಿವ ಕೆ.ಎಚ್.ಮುನಿಯಪ್ಪ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಯುವಕರಿಗೆ ಮಣೆ ಹಾಕಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಮನವಿ ಮಾಡಿದರು.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಚ್ಚೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಮಾತನಾಡಿದ ಸಚಿವರು, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ‌ ಅವರು ದೇಶದಲ್ಲಿ ಹೊಸ ಕ್ರಾಂತಿ ಮಾಡಿದ್ದು, ಕರ್ನಾಟಕದಲ್ಲಿ 9 ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಯುವಕರಿಗೆ ಆದ್ಯತೆ ನೀಡಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ರೈತರಿಗೆ ಎಂಎಸ್ ಪಿ ದರದಲ್ಲಿ ರೈತ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವುದು ನಮ್ಮ ಯೋಜನೆಯಾಗಿದೆ. ಅನ್ನಭಾಗ್ಯ, ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗಳನ್ನು ನಾನು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೇರಿ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ,‌ ಮಹಾಲಕ್ಷ್ಮಿ ಯೋಜನೆಯಡಿ ಬಡತನ‌ ರೇಖೆಗಿಂತ ಕೆಳಗೆ ಇರುವ ಜನರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡುವುದು, ಆರೋಗ್ಯ ವಿಮೆಗಾಗಿ 25 ಲಕ್ಷದವರೆಗೆ ಜೀವವಿಮೆ ಕೊಡಲಾಗುವುದು ಎಂದರು. ‌

ಮೃಣಾಲ್‌ ಹೆಬ್ಬಾಳಕರ್ ಯುವ ನಾಯಕರಿದ್ದು, ಒಳ್ಳೆಯ ಬುಧ್ದಿವಂತಿಕೆಯ ನಾಯಕ, ಅವರನ್ನು ಅತಿಹೆಚ್ಚು ಮತಗಳಿಂದ ‌ಗೆಲ್ಲಿಸಬೇಕು. ಮೃಣಾಲ್‌ ತಾಯಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಮ್ಮ ಕೆಲಸಗಳಿಗಾಗಿ ಮುಖ್ಯಮಂತ್ರಿಗಳ ಬಳಿ ಹೋರಾಟ ಮಾಡುತ್ತಾರೆ. ಇವರ ಮಗ ಲೋಕಸಭೆಯಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಲಿದ್ದಾನೆ. ಮೃಣಾಲ್‌ ಹೆಬ್ಬಾಳಕರ್ ಗೆಲ್ಲಿಸುವ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಅವರ ಕೈ ಬಲಪಡಿಸಬೇಕು ಎಂದು‌ ಸಚಿವ ಮುನಿಯಪ್ಪ ಕರೆ ನೀಡಿದರು.

ರೈತರ ಸಾಲ ಮನ್ನಾ ಮಾಡುವುದು, ಯುವಕರಿಗೆ ಉದ್ಯೋಗದ ಅವಕಾಶಗಳನ್ನು ಕೊಡುವುದು ನಮ್ಮ ಪಕ್ಷದಿಂದ ಮಾತ್ರ ಸಾಧ್ಯ. ಬೆಳಗಾವಿಯ ಎಲ್ಲಾ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಆಶೀರ್ವಾದ ಮಾಡಿ ಜಯಶೀಲರನ್ನಾಗಿಸಬೇಕು ಎಂದರು.

ಬೀಗರು ಬೀಗರಾಗಿ ಇದ್ದರೆ ಚೆಂದ
ಬೆಳಗಾವಿ ಬೀಗರು ಬೀಗರಾಗಿಯೇ ಇದ್ದರೆ ಚೆಂದ. ಅವರಿಗೂ ನಮ್ಮ ಜಿಲ್ಲೆಗೂ ಸಂಬಂಧವಿಲ್ಲ. ಜಿಲ್ಲೆಗೆ ಮೋಸ ಮಾಡಿದ ವ್ಯಕ್ತಿಗೆ ಮಣೆ ಹಾಕುವುದು ಎಷ್ಟು ಸರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.

ಬಿಜೆಪಿಯವರು ಹೇಳಿದ ಹಾಗೆ ಪೆಟ್ರೋಲ್ ಬೆಲೆ, ಸಿಲಿಂಡರ್ ಬೆಲೆ ಕಡಿಮೆ ಆಗಲಿಲ್ಲ. ಬದಲಿಗೆ ಅಗತ್ಯ ವಸ್ತುಗಳ ಬೆಲೆ ದುಬಾರಿ ಆದವು. ನಾವು ಜನರಿಗೆ ಕೊಟ್ಟ ಭಾಷೆಯನ್ನು ನಡೆಸಿಕೊಟ್ಟಿದ್ದೇವೆ. ಗೃಹಲಕ್ಷ್ಮಿ ಯೋಜನೆ ಹಣ‌ ಕೊಡುತ್ತಿದ್ದೇವೆ, ತಪ್ಪದೇ ಜನರಿಗೆ ಹಣ ಹಾಕುತ್ತಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ, ಮೃಣಾಲ್‌ ಹೆಬ್ಬಾಳಕರ್ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾನೆ. ನನ್ನಂತೆಯೇ ಜನರಿಗೆ ಸ್ಪಂದಿಸಲಿದ್ದಾನೆ. ನಾನು ಎರಡು ಬಾರಿ ಸೋತರೂ ಮನೆಯಲ್ಲಿ ಕೂರದೆ ಕೆಲಸ ಮಾಡಿರುವೆ. ಯಾವತ್ತೂ ಜಾತಿ, ಭಾಷೆ ರಾಜಕಾರಣ ಮಾಡಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ವೇಳೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಆನಂತಕುಮಾರ್ ಬ್ಯಾಕೂಡ, ಪದ್ಮರಾಜ ಪಾಟೀಲ್, ಗೋವಾದ ಯುವ ಕಾಂಗ್ರೆಸ್ ಅಧ್ಯಕ್ಷ ವರದ ಮಂಡೊಳ್ಕರ್, ಗೋವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೇಶ್ ವರೆಕೆರೆ, ಮಲ್ಲೇಶ್ ಚೌಗಲೆ, ಕುಶಪ್ಪ, ಜಯಶ್ರೀ‌ ಮಾಳಗಿ, ಆರ್.ಟಿ.ರಾಥೋಡ್,‌ ಸುನೀತಾ‌ ಐಹೊಳೆ, ಕಸ್ತೂರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ವರದಿ:-ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!