ಬೆಳಗಾವಿ : -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕಳೆದ ಎರಡು ದಿನಗಳಿಂದ ರಾಮದುರ್ಗ ವಿಧಾನಸಭಾ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಕೈಕೊಂಡಿದ್ದಾರೆ. ಹೋದಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಕ್ಷೇತ್ರದ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತಿದ್ದಾರೆ.
ರಾಮದುರ್ಗದ ಹಲಗತ್ತಿ, ಲಿಂಗದಾಳ, ಇಡಗಲ್, ಚಿಕ್ಕತಡಸಿ ಗ್ರಾಮಗಳಲ್ಲಿ ಪ್ರಚಾರ ಮುಗಿಸಿದ ಸಚಿವರು, ಹಂಪಿಹೊಳಿಗೆ ಆಗಮಿಸಿದರು. ಹಂಪಿಹೊಳಿಯಲ್ಲಿ ಸಚಿವರಿಗೆ ಅಚ್ಚರಿ ಕಾದಿತ್ತು. ಸಚಿವರಿಗೆ ವಿಶೇಷ ಚೇತನ ಯುವತಿ ರೋಷನ್ ಬೀ ಎಂಬುವರು ಹೂವು ಕೊಟ್ಟು ಸ್ವಾಗತಿಸಿದರು. ಸಚಿವರನ್ನು ಕಂಡು ಖುಷಿಗೊಂಡ ರೋಷನ್ ಬೀ, ಅವರ ಕೈಹಿಡಿದು ಪ್ರಚಾರ ನಿಗದಿಯಾಗಿದ್ದ ಸ್ಥಳದವರೆಗೂ ನಡೆದರು.
ರೋಷನ್ ಬೀ ಅಭಿಮಾನ ಕಂಡು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಆಕೆಯೊಂದಿಗೆ ಮುಕ್ತವಾಗಿ ಮಾತನಾಡುತ್ತ ಸಾಗಿದರು. ‘ಸಚಿವರನ್ನು ಇಷ್ಟು ದಿನ ಕೇವಲ ಟಿವಿ, ಪೇಪರ್ ಗಳಲ್ಲಿ ನೋಡುತ್ತಿದ್ದೆ. ಇವತ್ತು ಅವರನ್ನು ಹತ್ತಿರದಿಂದ ನೋಡಿ ಖುಷಿ ಆಯಿತು. ನನಗೆ ಸ್ವಂತ ಮನೆ ಇಲ್ಲ. ನನ್ನ ಅಕ್ಕ ಕೂಡ ವಿಕಲ ಚೇತನಳು, ಆಪರೇಷನ್ ಆಗಿದೆ. ನನ್ನ ಕೆಲವೊಂದು ಸಮಸ್ಯೆಗಳನ್ನು ಸಚಿವರಿಗೆ ಹೇಳಿರುವೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ರೋಷನ್ ಬೀ ಹೇಳಿ ಕೊಂಡರು.
ಮದುವೆ ಕಾರ್ಯಕ್ರಮದಲ್ಲಿ ಭಾಗಿ ಬಳಿಕ ರೋಷನ್ ಬೀ ಮನವಿ ಮೇರೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಂಬಂಧಿಕರ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜೊತೆಗೆ ರೋಷನ್ ಬೀ ತಮ್ಮ ಕುಟುಂಬ ಸದಸ್ಯರನ್ನು ಸಚಿವರಿಗೆ ಪರಿಚಯಿಸಿಕೊಟ್ಟು ಸಂಭ್ರಮಿಸಿದರು. ವಿಕಲ ಚೇತನಳ ಜೀವನೋತ್ಸಾಹ, ಸಚಿವರ ಬಗೆಗಿನ ಪ್ರೀತಿ, ಆಕೆಯ ಕುರಿತ ಸಚಿವರ ಕಾಳಜಿ ಎಲ್ಲವನ್ನೂ ನೋಡಿದ ಅಲ್ಲಿದ್ದವರಿಗೆ ಖುಷಿಯೋ ಖುಷಿ.
ವರದಿ ಪ್ರತೀಕ ಚಿಟಗಿ